ನ೫, ೬ ಬಿಲ್ಲವ ಕ್ರೀಡಾಕೂಟ

246bc27c-4fc0-4122-9396-8ccf6ea313af
Published on

ಮಡಿಕೇರಿ: ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘ, ಬಿಲ್ಲವ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ನ೫, ೬ ಬಿಲ್ಲವ ಕ್ರೀಡಾಕೂಟ ಹಾಗೂ ೧೩ರಂದು ಶ್ರೀ ನಾರಾಯಣಗುರು ಜಯಂತೋತ್ಸವ, ಗೌರವ ಸಮರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ೫ರಂದು ಬೆಳಿಗ್ಗೆ ೮.೩೦ ಗಂಟೆಯಿಂದ ಗರಗಂದೂರು ಡಿ.ಚೆನ್ನಮ್ಮ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕ್ರಿಕೇಟ್ ಪಂದ್ಯಾವಳಿಗೆ ಹರದೂರು ಗ್ರಾ.ಪಂ.ಅಧ್ಯಕ್ಷ ಬಿ.ಡಿ. ಪದ್ಮನಾಭ ಹಾಗೂ ಬೇಳೂರು ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಪ್ರಶಾಂತ್ ಚಾಲನೆ ನೀಡಲಿದ್ದಾರೆ. ನ೧೧ರಂದು ಸುಂಟಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ವಾಲಿಬಾಲ್, ಥ್ರೋಬಾಲ್ ಪಂದ್ಯಾಟ ನಡೆಯಲಿದ್ದು, ಸುಂಟಿಕೊಪ್ಪ ಗ್ರಾ.ಪಂ. ಪಿಡಿಓ ವೇಣುಗೋಪಾಲ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಉಪ ಠಾಣಾಧಿಕಾರಿ ಬಿ.ಎಸ್.ವಿಠಲ್, ಕೆದಕಲ್ ಗ್ರಾ.ಪಂ. ಅಧ್ಯಕ್ಷೆ ವಿಶ್ಮಿತಾ, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ನಿರೂಪ ಹರೀಶ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.


ನ೧೩ರಂದು ಸುಂಟಿಕೊಪ್ಪದ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೭ ಗಂಟೆಗೆ ಗಣಹೋಮ, ೮ ಗಂಟೆಗೆ ವಿಶೇಷ ಆಕರ್ಷಣೆಯಾದ ಶ್ರೀ ನಾರಾಯಣಗುರುವಿನ ಮಂಡಲ ಕಲಾಕೃತಿಯೊಂದಿಗೆ ಗುರು ಪೂಜೋತ್ಸವವನ್ನು ಉಪ್ಪಿನಂಗಡಿಯ ಶ್ರೀ ವಿನಯ್ ಶಾಂತಿ ಹಾಗೂ ತಂಡದವರು ನಡೆಸಿಕೊಡಲಿದ್ದಾರೆ. ಬೆಳಿಗ್ಗೆ ೯ ಗಂಟೆಗೆ ತುಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ನವರಸರಾಜ ಬೋಜರಾಜ ವಾಮಂಜೂರು ಪಾಲ್ಗೊಳ್ಳಲಿದ್ದಾರೆ. ಅಂದು ಭವ್ಯ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರು ಮತ್ತು ಕೋಟಿ ಚೆನ್ನಯ್ಯನವರ ಭಾವಚಿತ್ರ ಹಾಗೂ ಕುಂಭಕಳಶದೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ಎಂ.ಮುಖೇಶ್, ಉಪಾಧ್ಯಕ್ಷ ನಾಗೇಶ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ, ಸುಂಟಿಕೊಪ್ಪ ಹೋಬಳಿಯ ಬಿಲ್ಲವ ವಿದ್ಯಾರ್ಥಿ ಘಟಕ ಅಧ್ಯಕ್ಷ ಬಿ.ಎಸ್.ಪ್ರೀತಮ್, ಸದಸ್ಯ ಅಕ್ಷಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net