ಜೀವನ ಬದಲಾಯಿಸಿಕೊಳ್ಳಲು ಕಾದಂಬರಿ ಸಹಕಾರಿ

ಜೀವನ ಬದಲಾಯಿಸಿಕೊಳ್ಳಲು ಕಾದಂಬರಿ ಸಹಕಾರಿ
Published on

ಕೊಳ್ಳೇಗಾಲ: ಕಾದಂಬರಿಗಳು ಜೀವನವನ್ನ್ನು ಬದಲಾಯಿಸಿ ಕೊಳ್ಳಲು ಸಹಕಾರಿಯಾಗಿದೆ ಎಂದು ಖ್ಯಾತ ಬಂಡಾಯ ಸಾಹಿತಿ ಮತ್ತು ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್ ಹೇಳಿದರು.

ಪಟ್ಟಣದ ಶ್ರೀ ಅರುಣಾಚಲೇಶ್ವರ ಸಭಾಂಗಣದಲ್ಲಿ ಭಾನುವಾರ ಸಾಹಿತ್ಯ ಮಿತ್ರಕೂಟ ಆಯೋಜಿಸಿದ್ದ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾದಂಬರಿಯ ವಸ್ತು, ಚರಿತ್ರೆ, ಇತಿಹಾಸ, ದುರಂತ ಕಥೆ ಹೀಗೆ ಒಂದು ಕಾದಂಬರಿಯನ್ನು ವಿಮರ್ಶೆ ಮಾಡುವುದಾದರೆ ಅದರ ವಸ್ತು ತಿಳಿದುಕೊಳ್ಳಬೇಕು. ಕಾದಂಬರಿಯನ್ನು ಗ್ರಹಿಸುವ ರೀತಿ, ಪ್ರತಿಭೆ ಎರಡು ಸೇರಿ ಮೂರ್ತ ರೂಪದಲ್ಲಿ ತೋರುವಂತಿದ್ದರೆ ಕಾದಂಬರಿಯಾಗುತ್ತದೆ ಎಂದು ಹೇಳಿದರು.

ಕಾದಂಬರಿಯಲ್ಲಿ ಮೂಲ ನಂಬಿಕೆಯನ್ನು ಬಿತ್ತ ಬಹುದು, ನಾವು ಬಿತ್ತಿದಂತ ಬೀಜ ಒಳ್ಳೆಯ ಬೆಳೆ ಕೊಡುವಂತೆ ಕಾದಂಬರಿಯೂ ಒಳ್ಳೆಯ ಕಾದಂಬರಿಯಾಗಿ ಮುಂದುವರಿಯಬೇಕು. ಎಷ್ಟೋ ಜನರ ಕಾದಂಬರಿಗಳು ಜೀವನವನ್ನೇ ಬದಲಾಯಿಸಿಕೊಳ್ಳಲು ಸಹಾಯಕವಾಗಿದೆ ಹಾಗೂ ಕಾದಂಬರಿಗಳು ಸಮಾಜಕ್ಕೆ ಕೊಡುಗೆ ಕೊಡುವಂತಹ ಕಾದಂಬರಿಗಳಾಗಿ ಹೊರಹೊಮ್ಮಿವೆ. ಕಾದಂಬರಿಕಾರರಿಗೆ ನ್ಯಾಯ ಕೊಡಬೇಕಾದರೆ ಆ ಕಾದಂಬರಿಯನ್ನು ಓದಬೇಕು ಎಂದು ತಿಳಿಸಿದರು.

ಕುವೆಂಪು ಅವರ ಎರಡು ಕಾದಂಬರಿಗಳ ಜನಪ್ರಿಯತೆಯ ಬಗ್ಗೆ ಕೂಡ ತಿಳಿಸಿದರು. ರಾಜ್ಯ ಪ್ರಶಸ್ತಿ ಯಿಂದ ತಮಗೆ ಬಂದಂತಹ ಐದು ಲಕ್ಷ ರೂಪಾಯಿಗಳನ್ನು ಸಾಹಿತ್ಯ ಮಿತ್ರಕೂಟಕ್ಕೆ ಅನುದಾನವಾಗಿ ಕೊಡುವುದಾಗಿಯೂ ತಿಳಿಸಿದರು.

ವಿಜೇತ ಕೃತಿಗಳನ್ನು ಕುರಿತು ಪ್ರೊ.ಮೈಸೂರು ಕೃಷ್ಣ ಮೂರ್ತಿ ಮಾತನಾಡಿ, ಸಮಾಜಕ್ಕೆ ಸಾಹಿತಿಗಳು ಭೂಷಣ, ಇಂದಿನ ವಿದ್ಯಮಾನ ಕುರಿತು ಬರೆಯುವವರಿಗಿಂತ ಓದುವವರು ಕಡಿಮೆಯಾಗಿದ್ದಾರೆ ಎಂಬುದರ ಬಗ್ಗೆ ಉಲ್ಲೇಖಿಸುತ್ತಾ ಕಾಲೇಜಿನಲ್ಲಿ ಓದುವಾಗ ಅವರ ಗುರುಗಳ ಬಗ್ಗೆ, ಒಳ್ಳೆಯ ಪುಸ್ತಕವನ್ನು ಓದುತ್ತಿದ್ದಂತಹ ದಿನಗಳನ್ನು ಸ್ಮರಿಸಿದರು.

ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ಮಾತನಾಡಿ, ಬಿ.ಟಿ. ಲಲಿತಾ ನಾಯಕ್ ಅವರ ಕೃತಿಗಳ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಸಾಹಿತ್ಯ ಮಿತ್ರಕೂಟ ವತಿಯಿಂದ ಕಾದಂಬರಿ ವಿಜೇತರಾದ ಬಂಗಿ ದೊಡ್ಡ ಮಂಜುನಾಥ್, ಕಾರ್ತಿಕಾದಿತ್ಯ ಹಾಗೂ ಗಿರಿರಾಜ ಅವರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಮಿತ್ರಕೂಟದ ಸಂಸ್ಥಾಪನಾ ಅಧ್ಯಕ್ಷ ಪ್ರೊ.ದೊಡ್ಡ ಲಿಂಗೇಗೌಡ, ಕಾರ್ಯದರ್ಶಿ ಸತೀಶ್, ಸಂಘದ ನಿರ್ದೇಶಕರು, ಪದಾಧಿಕಾರಿಗಳು ಸಾಹಿತ್ಯಾಸಕ್ತರು ಇದ್ದರು. ಬಿ.ಟಿ.ಲಲಿತಾ ನಾಯಕ್, ಮದ್ದೂರು ದೊರೆಸ್ವಾಮಿ, ಶಂಕರ್, ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net