ಇತಿಹಾಸ ಸತ್ತವರ ಕಥೆಯಲ್ಲ ಜೀವಂತ ಪ್ರವಾಹ: ಪತ್ರಾಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ಅಭಿಮತ

Novel release ceremony Mandya
Published on

ಮಂಡ್ಯ: ಇತಿಹಾಸ ಬರೆಯುವುದು ಸುಲಭವಲ್ಲ. ಮಾತ್ರವಲ್ಲದೆ ಇತಿಹಾಸ ಎನ್ನುವುದು ಸತ್ತವರ ಕಥೆಯಲ್ಲ. ಬದಲಿಗೆ ಅದೊಂದು ಜೀವಂತ ಪ್ರವಾಹ ಎಂದು ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಆಯೋಜಿಸಿದ್ದ ಪ್ರಾಧ್ಯಾಪಕ ಪ್ರೊ.ಎಂ.ಜಿ.ಭರತ್‌ರಾಜ್ ರಚಿಸಿರುವ ಗಂಗರಾಜ ಚಾರಿತ್ರಿಕ ಕಾದಂಬರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಬರೀ ಘಟನಾವಳಿಗಳೂ ಸಹ ಅಲ್ಲ. ಯುದ್ಧ ಮಾಡೋದು ಅಷ್ಟೇ ಅಲ್ಲ. ಸಾಮ್ರಾಜ್ಯಗಳನ್ನು ನಿರ್ನಾಮ ಮಾಡಿ ಕಟ್ಟುವುದಷ್ಟೇ ಅಲ್ಲ ಎಂದರು.

ಮೈಸೂರು ಮಹಾರಾಜರು ಎಷ್ಟು ಯುದ್ಧಗಳನ್ನು ಮಾಡಿದರು ಎನ್ನುವುದು ಮುಖ್ಯ ಅಲ್ಲ. ಮೈಸೂರನ್ನ ಒಂದು ಆಧುನಿಕ ಸಂಸ್ಥಾನವನ್ನಾಗಿ ಹೇಗೆ ಕಟ್ಟಿದರು ಎಂಬುದು ಮುಖ್ಯವಾಗುತ್ತದೆ. ಮೈಸೂರಿಗೆ ಬಂದಿದ್ದ ಗಾಂಧೀಜಿ ಅವರು ಮೈಸೂರು ಸಂಸ್ಥಾನದ ಆಡಳಿತ ನೋಡಿದರೆ ಭಾರತದಲ್ಲಿ ಇರುವಂತಹ 532 ಸಂಸ್ಥಾನಗಳಲ್ಲಿ ಇಂತಹ ಆಡಳಿತ ಬಂದರೆ ನಮಗೆ ಸ್ವಾತಂತ್ರ್ಯ ಬೇಕಿಲ್ಲ ಎಂದಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ರಾಜ ಋಷಿ ಎಂದು ಕರೆದಿದ್ದರು. ಅದಕ್ಕೆ ಪುಷ್ಟಿ ನೀಡುವಂತೆ ನಮಗೆ ಏಕೀಕರಣದ ಸಮಯದಲ್ಲಾಗಲಿ ಅಥವಾ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಾಗಲಿ, ಉತ್ತರ ಕರ್ನಾಟಕದಲ್ಲಿ ಆದಂತ ಘಟನೆಗಳು ಚಳವಳಿಯ ತೀವ್ರ ಸ್ವರೂಪ ಮೈಸೂರು ಭಾಗದಲ್ಲಿ ಆಗಲಿಲ್ಲ. ಸ್ವಾತಂತ್ರ್ಯ ಸಂಗ್ರಾಮ ಮೈಸೂರು ಸಂಸ್ಥಾನದಲ್ಲಿ ಪ್ರಭಾವಶಾಲಿಯಾಗಿ ನಡೆಯಲಿಲ್ಲ. ಅರಮನೆಗೆ ಚಳವಳಿಗಳು ತೀವ್ರತೆ ಕಾಡಲಿಲ್ಲ. ಏಕೆಂದರೆ ಮೈಸೂರು ಮಾದರಿ ಸಂಸ್ಥಾನವಾಗಿತ್ತು. ಭರತರಾಜ್ ಅವರು ತಲಕಾಡಿನ ರಾಜರ ಬಗೆಗಿನ ಐತಿಹ್ಯ ಜಾನಪದ ಹಿನ್ನೆಲೆ ಇಟ್ಟುಕೊಂಡು ಪುಸ್ತಕ ಬರೆದಿದ್ದಾರೆ ಎಂದರು.

ಪ್ರಾಧ್ಯಾಪಕ ಪ್ರೊ.ಎಂ.ಜಿ.ಭರತ್‌ರಾಜ್ ಮಾತನಾಡಿ, ಇತಿಹಾಸಕಾರ ಕಥೆಗಳನ್ನು ಹೇಳಿ ಸಿದ್ಧಾಂತವನ್ನು ಜನರಿಗೆ ತಲುಪಿಸುತ್ತಾನೆ. ಯಾವುದೇ ಇತಿಹಾಸಕಾರ ಪೂರ್ವಗ್ರಹ ಪೀಡಿತನಾಗಿ ಇರಬಾರದು. ಭಾಷೆ ದೇಶ ಸಂಸ್ಕೃತಿ ಆತನಿಗೆ ತಿಳಿದಿರಬೇಕು. ಸಂಶೋಧನೆಯಲ್ಲಿ ಮತ್ತು ಬೌದ್ಧಿಕತೆಯಲ್ಲಿ ಪ್ರಾಮಾಣಿಕನಾಗಿರಬೇಕು ಎಂದರು.

ಇತಿಹಾಸದ ಪ್ರತಿ ಸಣ್ಣ ಘಟನೆಗಳ ಮೇಲೂ ಐತಿಹಾಸಿಕವಾದ ನಂಬಿಕೆಯನ್ನು ಇಟ್ಟುಕೊಂಡು ಕಾದಂಬರಿ ರಚನೆ ಮಾಡಿದ್ದೇನೆ. 280 ಪುಟಗಳ ಈ ಕಾದಂಬರಿ ರಚಿಸಲು ಎರಡೂವರೆ ವರ್ಷ ಬೇಕಾಯಿತು. ನನ್ನ ಅಜ್ಜಿ ಮರಳಿನ ಮೇಲೆ ಬರೆದು ಅಕ್ಷರ ಬರೆದು ಕಲಿತವರು. ಕುಮಾರವ್ಯಾಸನ ಭಾರತವನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ನಮ್ಮ ತಂದೆ ಗಂಗರಾಜನ ಕಥೆ, ಐತಿಹ್ಯವನ್ನು ಹೇಳುತ್ತಿದ್ದರು. ಇದು ನನಗೆ ಪ್ರೇರಣೆಯಾಯಿತು ಎಂದು ನೆನಪಿಸಿಕೊಂಡರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ, ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ದಾನೇಗೌಡ, ಮನ್ಸೂರ್ ಪಾಷಾ, ಎಲ್.ಪೂರ್ಣಿಮಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರತಾಪ್, ಮುಕುಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net