

ಗಂಗಾವತಿ: ತಾಲೂಕಿನ ಜಂಗಮರಕಲ್ಗುಡಿ ಅಂಗನವಾಡಿ ಕೇಂದ್ರಕ್ಕೆ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯರ ತಂಡ ಶನಿವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿತು.
ಸಮಿತಿ ಅಧ್ಯಕ್ಷ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ್ ನೇತೃತ್ವದ ತಂಡ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಮಕ್ಕಳ ಲಾಲನೆ, ಪಾಲನೆ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು.
ಕೇಂದ್ರಗಳಲ್ಲಿ ಕಲಿಕಾ ಸಲಕರಣೆ, ಪೌಷ್ಟಿಕ ಆಹಾರ ಗುಣಮಟ್ಟ, ಶುದ್ಧ ಕುಡಿವ ನೀರು, ಗಾಳಿ, ಬೆಳಕಿನ ವ್ಯವಸ್ಥೆ, ಆಹಾರ ತಯಾರಿಕೆ ಕೊಠಡಿಯಲ್ಲಿ ಸ್ವಚ್ಛತೆ ಮತ್ತು ಶೌಚಗೃಹದ ವ್ಯವಸ್ಥೆಯನ್ನು ಪರಿಶೀಲಿಸಿತು.
ಇದನ್ನು ಓದಿ: ಗರ್ಭಿಣಿಯರು ತಪ್ಪದೆ ಪೌಷ್ಟಿಕ ಆಹಾರ ಸೇವಿಸಿ
ಕೇಂದ್ರದ ಸುತ್ತಲೂ ಪರಿಸರ ಸ್ವಚ್ಛತೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿ ಹೇಳಿದರಲ್ಲದೇ, ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ದುರಸ್ತಿಗೊಳಗಾಗಿರುವ ಶೌಚಗೃಹ ಮತ್ತು ಕೇಂದ್ರದ ಕಟ್ಟಡವನ್ನು ಸರಿಪಡಿಸುವಂತೆ ಸಿಡಿಪಿಒ ಪ್ರವೀಣ ಹೇರೂರಿಗೆ ಸೂಚಿಸಿದರು.
ಕಲಿಕಾ ವಾತಾವರಣ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು. ಕೈಗೊಂಡ ಕ್ರಮಗಳ ಕುರಿತು ಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಿದರು.