

ಹುಬ್ಬಳ್ಳಿ: ಮನೆಗೆ ನುಗ್ಗಿ ಮನೆಯಲ್ಲಿದ್ದವರ ಬಟ್ಟೆ ಬಿಚ್ಚಿ ಭೀಕರವಾಗಿ ಮತ್ತು ಯದ್ವಾತದ್ವಾ ಥಳಿಸಿ ದರೋಡೆ ನಡೆಸುತ್ತಿದ್ದ ಚಡ್ಡಿ ಗ್ಯಾಂಗ್ ನಾಯಕನ ಎರಡೂ ಕಾಲಿಗೆ ಪೊಲೀಸರು ಶನಿವಾರ ಗುಂಡು ಹಾರಿಸಿದ ಘಟನೆ ನವಲೂರಿನಲ್ಲಿ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಟೋರಿಯಸ್ ಕ್ರಿಮಿನಲ್ ಪಾಲಾ ವೆಂಕಟೇಶ್ವರರಾವ್ ಅಲಿಯಾಸ್ ಕಲ್ಯಾಣ ಕುಮಾರ ಪೊಲೀಸ್ ಬಲೆಗೆ ಬಿದ್ದಾತ.
ನಿನ್ನೆ ರಾತ್ರಿ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ನವಲೂರಿನ ಹೊರವಲಯದಲ್ಲಿ ವಿಕಾಸಕುಮಾರ ಎಂಬುವವರ ಮನೆ ದರೋಡೆಗೆ ಚಡ್ಡಿ ಗ್ಯಾಂಗ್ ಯತ್ನಿಸಿತ್ತು. ಈ ಸಂದರ್ಭದಲ್ಲಿ ಎಚ್ಚರಗೊಂಡ ವಿಕಾಸಕುಮಾರ ಅಕ್ಕಪಕ್ಕದವರನ್ನು ಎಚ್ಚರಿಸಿ, ಗಸ್ತಿನಲ್ಲಿದ್ದ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಜನರ ಗದ್ದಲ ಏಳುತ್ತಿದ್ದಂತೆಯೇ ಓಡಿಹೋಗಲೆತ್ನಿಸಿದ ಪಾಲಾ ವೆಂಕಟೇಶ್ವರರಾವ್ ಪೊಲೀಸರಿಗೆ ಸೆರೆ ಸಿಕ್ಕದ್ದಾನೆ.
ಇನ್ನುಳಿದ ಸದಸ್ಯರ ಪತ್ತೆಗಾಗಿ ಬೆಳಗಿನಜಾವ ಕೈಗಾರಿಕಾ ಪ್ರದೇಶಕ್ಕೆ ಪೊಲೀಸರು ವೆಂಕಟೇಶ್ವರರಾವ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಗಾರ್ಡನ್ ಸುತ್ತಮುತ್ತ ಸೇರುವ ಮಾಹಿತಿ ನೀಡಿ, ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಕಾನ್ಸ್‌ಟೇಬಲ್ ಆನಂದ ಬಡಿಗೇರ, ಪಿಎಸ್‌ಐ ಪ್ರಮೋದ ಎಚ್.ಜಿ. ಮೇಲೆ ದಾಳಿ ಮಾಡುತ್ತಾನೆ. ಪ್ರಮೋದ ತಮ್ಮ ಬಳಿ ಇದ್ದ ಗನ್‌ನಿಂದ ದರೋಡೆಕಾರನ ಎರಡೂ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಗಾಯಗೊಂಡ ಆನಂದ ಬಡಿಗೇರ, ಪ್ರಮೋದ ಎಚ್.ಜಿ. ಹಾಗೂ ಆರೋಪಿ ಪಾಲಾ ವೆಂಕಟೇಶ್ವರರಾವ್‌ನನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈತನ ವಿರುದ್ಧ ಕರ್ನಾಟಕ ಸೇರಿ ದಕ್ಷಿಣ ಭಾರತದ ನಾಲ್ಕು ಜಿಲ್ಲೆಗಳಲ್ಲಿ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈತನೊಂದಿಗಿದ್ದ ತಂಡದ ಇನ್ನುಳಿದ ಸದಸ್ಯರು ಪರಾರಿಯಾಗಿದ್ದು, ಅವರಿಗಾರಿ ಶೋಧಕಾರ್ಯ ನಡೆದಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.
ದರೋಡೆ ವಿಡಿಯೋ ಬಿಡುಗಡೆ: ಧಾರವಾಡ ಹೊರವಲಯದ ನವಲೂರಿನಲ್ಲಿ ಕಳೆದ ಜೂ. 6ರ ತಡರಾತ್ರಿ ದೊಡ್ಡ ಗಾತ್ರದ ಕಲ್ಲಿನಿಂದ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದ ಈ ಚಡ್ಡಿ ಗ್ಯಾಂಗ್, ಅಶೋಕ ಕದಂ ಮತ್ತು ಪತ್ನಿ ಲಲಿತಾ ಅವರನ್ನು ಕಬ್ಬಿಣದ ಸರಳುಗಳಿಂದ ಹಲ್ಲೆ ಮಾಡಿ ಅಲ್ಮೇರಾದಲ್ಲಿದ್ದ ಅಂದಾಜು 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಐ ಸಂಗಮೇಶ ದಿಡಗನಾಳ ನೇತೃತ್ವದ ತಂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಚುರುಕುಗೊಳಿಸಿತ್ತು. ದರೋಡೆ ಮಾಡುವ ಗ್ಯಾಂಗ್‌ನ ವಿಡಿಯೋವನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ದೃಶ್ಯಗಳು ಬೆಚ್ಚಿ ಬೀಳುವಂತಿವೆ.