ಕುಖ್ಯಾತ ಮನೆಗಳ್ಳನ ಬಂಧನ

FotoJet
Published on

ಮಾಗಡಿ ಪೊಲೀಸರ ಕಾರ್ಯಾಚರಣೆ | 43,82,500 ರೂ. ಮೌಲ್ಯದ ಚಿನ್ನಾಭರಣ, ಕಾರು ವಶ

ಮಾಗಡಿ: ಕುಖ್ಯಾತ ಮನೆಗಳ್ಳನನ್ನು ಸೋಮವಾರ ಬಂಧಿಸಿರುವ ಮಾಗಡಿ ಪೊಲೀಸರು, 43,82,500 ರೂ. ಮೌಲ್ಯದ ಚಿನ್ನಾಭರಣ, ಕಾರು ವಶಪಡಿಸಿಕೊಂಡಿದ್ದಾರೆ.

ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮದ ಕೆ.ಶಿವು ಬಂಧಿತ ಆರೋಪಿ.

ಇತ್ತೀಚೆಗೆ ಪಟ್ಟಣದ ವೇಣುಗೋಪಾಲ್ ಅವರ ಮನೆಯ ಬಾಗಿಲು ಮುರಿದು ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಲಾಗಿತ್ತು. ಈ ಬಗ್ಗೆ ದೂರು ದಾಖಲಾಗಿತ್ತು.

ಪ್ರಕರಣದಲ್ಲಿ ಭಾಗಿಯಾಗಿದ್ದ 3 ಮಂದಿ ಆರೋಪಿಗಳನ್ನು ಈ ಮೊದಲೇ ಬಂಧಿಸಿ, ಪಡೆದು ಕಳವು ಮಾಡಿದ್ದ ಮಾಲನ್ನು ವಶಪಡಿಸಿಕೊಂಡಿದ್ದ ಪೊಲೀಸರು 4ನೇ ಆರೋಪಿ ಕೆ.ಶಿವು ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದರು. ಸೋಮವಾರ ಆರೋಪಿ ಸಿಕ್ಕಿಬಿದ್ದಿದ್ದಾನೆ. 4 ಆರೋಪಿಗಳಿಂದ 5 ಕೆಜಿ 578 ಗ್ರಾಂ ಚಿನ್ನ, 6ಕೆಜಿ 500 ಗ್ರಾಂ ಬೆಳ್ಳಿ, 11.74 ಲಕ್ಷ ರೂ. ನಗದು ಹಾಗೂ 5 ಕಾರು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಕೆ. ಶಿವು ಸಹಚರರೊಂದಿಗೆ ಕಾರಿನಲ್ಲಿ ಬಂದು ಬೀಗ ಹಾಕಿದ ಮನೆ ಗುರುತಿಸಿ ಮನೆಯಲ್ಲಿ ಇಲ್ಲದ್ದನ್ನು ಖಚಿತಪಡಿಸಿಕೊಂಡು ಚಿನ್ನಾಭರಣ, ನಗದು ಕಳವು ಮಾಡುವುದನ್ನೇ ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಮಾಗಡಿ ಠಾಣೆಯ 3, ಕುದೂರು ಠಾಣೆಯ 1, ತಾವರೆಕೆರೆ ಠಾಣೆಯ 1, ಅಂಕೋಲ ಠಾಣೆಯ 1 ಮನೆಗಳ್ಳತನ ಪ್ರಕರಣ ಪತ್ತೆ ಮಾಡಿದ್ದಾರೆ.

ಆರೋಪಿ ಮೇಲೆ 2011ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ಮಹಿಳೆಯೊಬ್ಬರ ಕೊಲೆ ಪ್ರಕರಣ ಸೇರಿ ಬೇಲೂರು, ಸಾಗರ ಪಟ್ಟಣ, ಮೂಡಿಗೆರೆ, ಕೆಆರ್ ಪೇಟೆ ಟೌನ್, ಮಂಡ್ಯ ಗ್ರಾಮಾಂತರ, ಮಂಡ್ಯ ಪಶ್ಚಿಮ, ಹಳೇಬೀಡು, ಆರೇಹಳ್ಳಿ, ಹೊಳೇನರಸಿಪುರ ಹಾಗೂ ಅನೇಕ ಕಡೆಗಳಲ್ಲಿ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಎಸ್ಪಿ ಆರ್.ಶ್ರೀನಿವಾಸ್‌ಗೌಡ ಮಾರ್ಗದರ್ಶನದಲ್ಲಿ ಮಾಗಡಿ ಇನ್‌ಸ್ಪೆಕ್ಟರ್ ಜಿ.ವೈ.ಗಿರಿರಾಜು ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net