

ಚಿಕ್ಕಬಳ್ಳಾಪುರ: ಮುಂಬರುವ 3 ತಿಂಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಶೇ.100 ರಷ್ಟು ಗುರಿ ಸಾಧಿಸಲು ಎಂದು ಸಂಸದ ಡಾ.ಕೆ ಸುಧಾಕರ್ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ನಿರುದ್ಯೋಗ ನಿವಾರಣೆ ಹಾಗೂ ಯುವಜನರ ಸಬಲೀಕರಣಕ್ಕಾಗಿ ಪಿಎಂ ಸ್ವ ನಿಧಿ, ಉದ್ಯೋಗಿನಿ, ವಿಶ್ವ ಕರ್ಮ ಯೋಜನೆ, ಸ್ವಾವಲಂಬನೆ, ಸಾರಥಿ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ನಬಾರ್ಡ್ ನ ಪಿಎಲ್ಪಿ ಯೋಜನೆಯ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ನಬಾರ್ಡ್ ನ ಎಜಿಎಂ ಮೋಹನ್ ಸಾಯಿ ಗಣೇಶ್, ಪ್ರಾದೇಶಿಕ ಅಧಿಕಾರಿ ಅಶೋಕ್ ಕುಮಾರ್, ಕೆಜಿಬಿನ ಎ.ಜಿ.ಎಂ ಪ್ರವಿಣ್ ಕುಮಾರ್, ಆರ್ಬಿಐ ನ ಜಿಲ್ಲಾ ವ್ಯವಸ್ಥಾಪಕ ಎಸ್.ಪಿ. ಗೌತಮ್, ಜಿ.ಪಂ.ಯೋಜನಾ ನಿರ್ದೇಶಕ ಈಶ್ವರಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್ ಮತ್ತಿತರರು ಇದ್ದರು.
*ಸಾಧನೆಯು ತೃಪ್ತಿದಾಯಕವಾಗಿಲ್ಲ
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ಪ್ರಗತಿಯು ತೃಪ್ತಿಕರವಾಗಿಲ್ಲ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.
ಯುವ ಜನರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೇಂದ್ರದ ಯೋಜನೆಗಳನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬAಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
*ಯೋಜನೆಗಳ ಪ್ರಗತಿ ಪರಿಶೀಲನೆ
ಸಂಸದ ಡಾ ಕೆ.ಸುಧಾಕರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಜನ್ ಧನ್ ಯೋಜನೆ, ಪಿಎಂಎಫ್ ಎಂಇ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲಿಸಲಾಯಿತು. ಫಲಾನುಭವಿಗಳ ಆಯ್ಕೆ, ಸವಲತ್ತುಗಳ ವಿತರಣೆ, ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ಮಹಿಳಾ, ಯುವ ಜನ, ಹಿರಿಯ ನಾಗರಿಕರ ಆರ್ಥಿಕ ಸಬಲೀಕರಣದಲ್ಲಿ ಬ್ಯಾಂಕುಗಳು ಸಮರ್ಪಕವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಲಾಯಿತು.