

ಪ್ರಕಾಶ್ ಮಂಜೇಶ್ವರ ಮಂಗಳೂರು
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ (ಶಕ್ತಿ) ಮೂಲಕ ದಿನಂಪ್ರತಿ ಸಹಸ್ರಾರು ಜನರು ರಾಜ್ಯದ ಇತರ ಜಿಲ್ಲೆಗಳಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರವಾಸಿ ಸ್ಥಳ, ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಯೋಜನೆಯ ಪ್ರಯೋಜನ ಪಡೆಯಲು ಕರಾವಳಿಯ ಮಹಿಳೆಯರಿಗೇ ಸಾಧ್ಯವಾಗುತ್ತಿಲ್ಲ. ಇಲ್ಲಿ ಕೆಎಸ್‌ಆರ್‌ಟಿಸಿ ಬಸ್ ಜಾಲ ಇನ್ನೂ ವಿಸ್ತರಣೆ ಆಗದಿರುವುದೇ ಇದಕ್ಕೆ ಕಾರಣ.
ದಕ್ಷಿಣ ಕನ್ನಡ ಜಿಲೆಯಲ್ಲಿ 34 ನರ್ಮ್ ಬಸ್‌ಗಳು ದಿನಂಪ್ರತಿ 343 ಮಾರ್ಗಗಳಲ್ಲಿ ಸಂಚರಿಸುತ್ತಿವೆ. 14 ನರ್ಮ್ ಬಸ್‌ಗಳಿಗೆ ನ್ಯಾಯಾಲಯದ ತಡೆಯಾಜ್ಞೆಯಿದೆ. 2016ರಿಂದ ಇದು ಇತ್ಯರ್ಥವಾಗಿಲ್ಲ. ಇತ್ಯರ್ಥವಾದರೆ ನಗರದಲ್ಲಿ 14 ಹೆಚ್ಚುವರಿ ನಗರ ಸಾರಿಗೆ ಬಸ್‌ಗಳು ಲಭ್ಯವಾಗುತ್ತವೆ.
ವಾಹನ ದಟ್ಟಣೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ಹಂಪನಕಟ್ಟೆ ಪ್ರದೇಶಕ್ಕೆ ಹೊಸ ಬಸ್ ಪರವಾನಗಿ ನಿರ್ಬಂಧಿಸಿ ಉಭಯ ಜಿಲ್ಲೆಗಳ ದಂಡಾಧಿಕಾರಿಗಳು(ಜಿಲ್ಲಾಧಿಕಾರಿ) 1993ರ ಏಪ್ರಿಲ್ 6ರಂದು ಅಧಿಸೂಚನೆ ಹೊರಡಿಸಿದ್ದರು. ಇದರ ಪ್ರಕಾರ ಮಂಗಳೂರಿನಲ್ಲಿರುವ ಕೊಟ್ಟಾರ ಕ್ರಾಸ್, ಕೆಪಿಟಿ, ಮಲ್ಲಿಕಟ್ಟೆ, ಕಂಕನಾಡಿ ಪ್ರದೇಶ ದಾಟಿ ಬಸ್‌ಗಳು ನಗರ ಪ್ರವೇಶಿಸಲು ಹೊಸ ಪರವಾನಗಿ ಒದಗಿಸಲು ಅವಕಾಶವಿಲ್ಲ. ಈಗಾಗಲೇ ಇರುವ ಹಳೆಯ ಬಸ್‌ಗಳು ಸಂಚಾರಕ್ಕೆ ಸಮಸ್ಯೆ ಇಲ್ಲ.
ಪ್ರಸ್ತಾವಿತ ಅಧಿಸೂಚನೆ ಬಳಿಕ ನಗರದ ಪ್ರಮುಖ ರಸ್ತೆಗಳು ಅಗಲಗೊಂಡಿವೆ. ನಗರದಲ್ಲಿ ಅಧಿಕ ಜನರು ಬರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಗರದ ಹೊರವಲಯಕ್ಕೆ ಶಿಫ್ಟ್ ಆಗಲು ಸಜ್ಜಾಗುತ್ತಿದೆ. ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್‌ಗಳು ಓಡಾಡುತ್ತಿವೆ. ಆದರೆ ಅಧಿಸೂಚನೆಯ ನೆಪವಾಗಿಟ್ಟುಕೊಂಡು ಹೊಸಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲು ಅಡ್ಡಿಪಡಿಸಲಾಗುತ್ತಿದೆ. ಅಂತರ್ ಜಿಲ್ಲಾ ಬಸ್‌ಗಳು ಮಂಗಳೂರು ಬಿಜೈ ಬಸ್ ನಿಲ್ದಾಣ ಪ್ರವೇಶಿಸಲು ಸಮಸ್ಯೆ ಇಲ್ಲ. ಆದರೆ ಮಂಗಳೂರು ನಗರ ಸಾರಿಗೆ ಬಸ್‌ಗಳಿಗೆ ಬಿಜೈ ನಿಲ್ದಾಣ ಪ್ರವೇಶಿಸಲು ಡಿಸಿ ಅಧಿಸೂಚನೆ ಅನ್ವಯ ಅವಕಾಶವಿಲ್ಲ. ದಂಡಾಧಿಕಾರಿ ಅಧಿಸೂಚನೆ ರಿಯಾಯಿತಿ ಕೋರಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಪ್ರತಿವರ್ಷ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸುತ್ತಲೇ ಇದೆ.
ಪ್ರಸ್ತುತ ಮಂಗಳೂರು ನಗರದಿಂದ ಮುಡಿಪು ಮಾರ್ಗದಲ್ಲಿ ಗರಿಷ್ಠ 8 ನರ್ಮ್ ಬಸ್‌ಗಳು ಇವೆ. ಅಡ್ಯಾರ್ ಪದವು, ಬಜ್ಪೆ, ಉಳಾಯಿಬೆಟ್ಟು, ಖಡ್ಗೇಶ್ವರಿ, ಗುರುಪುರ-ಕೈಕಂಬ, ಸೋಮೇಶ್ವರ, ವಾಮಂಜೂರು, ಕುಂಜತ್ತಬೈಲು, ರೆಹ್ಮತ್ ನಗರ, ಎಂಆರ್‌ಪಿಎಲ್, ಕಿನ್ಯಾ, ಪರಪ್ಪು, ಹರೇಕಳ, ಮಂಗಳೂರು ಜಂಕ್ಷನ್, ರೈಲ್ವೆ ಸ್ಟೇಷನ್, ಬಜಾಲ್‌ಪಡ್ಪು, ಲ್ಯಾಂಡ್‌ಲಿಂಕ್ಸ್, ಕುಂಪಲ, ಪೊಳಲಿ ಮಾರ್ಗಗಳಲ್ಲಿ ಕೆಲವೇ ಬಸ್‌ಗಳಿವೆ. ಮಂಗಳೂರು-ಬಂಟ್ವಾಳ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಇವೆ. ಕೆಎಸ್ ಆರ್‌ಟಿಸಿ, ವಾಯವ್ಯ ಕರ್ನಾಟಕ ಸಾರಿಗೆ ಅಥವಾ ಕಲ್ಯಾಣ ಕರ್ನಾಟಕ ಸಾರಿಗೆಯ ನಿಗದಿತ ನಿಲುಗಡೆಯ ಅನೇಕ ಬಸ್‌ಗಳು ಮಂಗಳೂರು-ಉಡುಪಿ ಮಾರ್ಗದಲ್ಲಿ ಪ್ರಯಾಣಿಕರಿಗೆ ದೊರೆಯುತ್ತವೆ. ಉಡುಪಿಯಲ್ಲಿ ಆರಂಭಿಕ ಹಂತದಲ್ಲಿದ್ದ 30 ನರ್ಮ್ ಬಸ್‌ಗಳಲ್ಲಿ 17 ಮಾತ್ರ ಸಂಚರಿಸುತ್ತಿವೆ. 13 ಬಸ್‌ಗಳು ಪ್ರಯಾಣಿಕರ ಕೊರತೆಯಿಂದ ಸಂಚಾರ ಸ್ಥಗಿತಗೊಳಿಸಿ ಕೆಲವು ವರ್ಷಗಳೇ ಕಳೆದಿವೆ.
ಮೂಡಬಿದಿರೆ ಮಾರ್ಗದಲ್ಲಿ ಗುರುಪುರ ಹಳೇ ಸೇತುವೆ ದುರ್ಬಲವಾಗಿದೆ ಎಂದು ಕೆಎಸ್‌ಆರ್‌ಟಿಸಿ ಬಸ್‌ಗೆ ದೊರೆತ ಪರವಾನಗಿ ತಡೆಹಿಡಿಯಲಾಗಿತ್ತು. ಹೊಸ ಸೇತುವೆ ನಿರ್ಮಾಣ ಬಳಿಕ ಎಂಟು ಬಸ್‌ಗಳಿಗೆ 56 ಟ್ರಿಪ್ ಓಡಿಸಲು ಕೆಎಸ್ಸಾರ್ಟಿಸಿ ಪರವಾನಗಿ ಕೇಳಿತ್ತು. ಆದರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನೀಡಿರುವುದು ಒಂದು ಬಸ್‌ಗೆ ಮೂರು ಸಿಂಗಲ್ ಟ್ರಿಪ್ ಮಾತ್ರ. ಈ ಕ್ರಮದ ವಿರುದ್ಧ ಕೆಎಸ್‌ಆರ್‌ಟಿಸಿ ನ್ಯಾಯಾಲಯದ ಮೆಟ್ಟಿಲು ಏರಿದೆ.
ಜಿಲ್ಲಾ ದಂಡಾಧಿಕಾರಿ ಅಧಿಸೂಚನೆಯಲ್ಲಿ ರಿಯಾಯಿತಿ ಒದಗಿಸಿದರೆ ಮಾತ್ರ ನಗರದಿಂದ ಹೆಚ್ಚುವರಿ ನಗರ ಸಾರಿಗೆ ಬಸ್‌ಗಳನ್ನು ಒದಗಿಸಲು ಅವಕಾಶ ಸಿಗುತ್ತದೆ. ಮೂಡುಬಿದಿರೆ ಮಾರ್ಗದಲ್ಲಿ ಅಧಿಕ ಬಸ್‌ಗಳಿಗೆ ಬೇಡಿಕೆ ಇದೆ. ಅಧಿಕ ಬಸ್ ಹಾಗೂ ಟ್ರಿಪ್‌ಗಳಿಗೆ ಅವಕಾಶ ಇದೆ.- ರಾಜೇಶ್ ಶೆಟ್ಟಿ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಮಂಗಳೂರು https://www.vijayavani.net/kadaba-suside