

ವಿಜಯಪುರ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಕಾರಣಗಳಿಂದ ತೆರವಾದ ಸದಸ್ಯ ಸ್ಥಾನಗಳಿಗೆ ಮೇ 25 ರಂದು ಉಪ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧಿಸೂಚನೆ ಹೊರಡಿಸಿದ್ದಾರೆ.
ನಿಡಗುಂದಿ ತಾಲೂಕಿನ ವಂದಾಲ ಹಾಗೂ ಯಲಗೂರ, ಚಡಚಣ ತಾಲೂಕಿನ ನಿವರಗಿ, ತಾಳಿಕೋಟೆ ತಾಲೂಕಿನ ಹಿರೂರ, ತಿಕೋಟಾ ತಾಲೂಕಿನ ತಾಜಪುರ-ಎಚ್., ಆಲಮೇಲ ತಾಲೂಕಿನ ಬಮ್ಮನಹಳ್ಳಿ ಹಾಗೂ ದೇವರನಾವದಗಿ, ಇಂಡಿ ತಾಲೂಕಿನ ಭತಗುಣಕಿ ಹಾಗೂ ಲಚ್ಯಾಣ ಮತ್ತು ವಿಜಯಪುರ ತಾಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.
ಚುನಾವಣಾ ವೇಳಾ ಪಟ್ಟಿ: ಮೇ 14 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮೇ 15 ರಂದು ನಾಮಪತ್ರಗಳ ಪರಿಶೀಲನೆ, ಮೇ 17 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಮೇ 25 ರಂದು ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಅವಶ್ಯವಿದ್ದರೆ ಮತದಾನ ಹಾಗೂ ಮೇ 28 ರಂದು ಚುನಾವಣೆ ಮುಕ್ತಾಯಗೊಳಿಸುವ ದಿನಾಂಕ ನಿಗದಿಪಡಿಸಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.