

ಕುಣಿಗಲ್ : ತಾಲೂಕಿನ ಗೊಟ್ಟಿಕೆರೆಗೆ ಕಾರ್ಖಾನೆ ತ್ಯಾಜ್ಯ ಹರಿಸಿ ಕೆರೆ ನೀರನ್ನು ಮಲಿನಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಕಾರ್ಖಾನೆಗಳಿಗೆ ನೋಟಿಸ್ ನೀಡಿರುವ ಅಧಿಕಾರಿಗಳು, ತ್ಯಾಜ್ಯ ಸಂಸ್ಕರಣಾ ಘಟದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ಅಂಚೇಪಾಳ್ಯ ಕೈಗಾರಿಕಾ ಪ್ರದೇಶದ ಸಮೀಪವಿರುವ ಗೊಟ್ಟಿಕೆರೆಗೆ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳು ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕದಿಂದ ರಾಸಾಯನಿಕಯುಕ್ತ ತ್ಯಾಜ್ಯ ನೀರು ಹರಿದು ಕೆರೆ ಸಂಪೂರ್ಣ ಮಲಿನಗೊಂಡಿತ್ತು. ಈ ಸಂಬಂಧ ಗೊಟ್ಟಿಕೆರೆ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಎಸಿ ಅಜಯ್, ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ಸೋಮವಾರ ಕೈಗಾರಿಕಾ ಪ್ರದೇಶ ಹಾಗೂ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕಾರ್ಖಾನೆಗಳ ಮುಖ್ಯಸ್ಥರ ಸಭೆ ನಡೆಸಿತು.
ಗೊಟ್ಟಿಕೆರೆಗೆ ತ್ಯಾಜ್ಯ ನೀರು ಹರಿದು ಬರಲು ಕೆಲವು ಕಾರ್ಖಾನೆಗಳು ಹಾಗೂ ಗೋವಿಂದ ಸಾಲ್ವೆಂಟ್ ತ್ಯಾಜ್ಯ ಸಂಸ್ಕರಣಾ ಘಟಕ ಕಾರಣವಾಗಿದೆ ಎಂದು ಗೋವಿಂದ ಸಾಲ್ವೆಂಟ್ ತ್ಯಾಜ್ಯ ಸಂಸ್ಕರಣಾ ಘಟಕದ ಮುಖ್ಯಸ್ಥ ವಿಶ್ವಾಸ್ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಎಸಿ ಅಜಯ್ ಅವರು, ಘಟಕದಲ್ಲಿ 10 ವರ್ಷದಿಂದ ಸಂಗ್ರಹಿಸಿರುವ ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ಹಾಗೇ ಕೊಳೆಯಲು ಬಿಟ್ಟಿದ್ದೀರಿ, ಅವಧಿ ಮುಗಿದ ಔಷಧಗಳನ್ನು ತಂದು ರಾಶಿ ಹಾಕಿದ್ದೀರಿ, ಇದರಿಂದಲೇ ತ್ಯಾಜ್ಯ ಕೆರೆ ಸೇರುತ್ತಿದೆ. ಜತೆಗೆ ಘಟಕ ನಡೆಸಲು ನಿಮ್ಮ ಬಳಿ ಯಾವುದೇ ಸರಿಯಾದ ದಾಖಲೆಗಳೂ ಇಲ್ಲ. ನೀವು ಇಲ್ಲಿ ಜನರನ್ನು ಸಾಯಿಸಲು ಬಂದಿದ್ದೀರಾ ಎಂದು ಕಿಡಿಕಾರಿದರು.
ಕಾರ್ಖಾನೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳಿದ್ದರೂ ಕೆಲವು ಕಾರ್ಖಾನೆಗಳು ಸಂಸ್ಕರಿಸದೆ ತ್ಯಾಜ್ಯವನ್ನು ಹೊರಗೆ ಬಿಡುತ್ತಿದ್ದಾರೆ. ಕೂಡಲೇ ಇದನ್ನು ಸರಿಪಡಿಸಿಕೊಳ್ಳದಿದ್ದರೆ ಮುಲಾಜಿಲ್ಲದೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತ್ಯಾಜ್ಯ ಹರಿಸಿದರೆ ಕ್ರಮ :ಅಂಚೆಪಾಳ್ಯ ಕೈಗಾರಿಕಾ ಪ್ರದೇಶದಲ್ಲಿ 25 ಕಾರ್ಖಾನೆಗಳಿವೆ. ಈ ಪೈಕಿ ಸಂಸ್ಕರಿಸದೆ ತ್ಯಾಜ್ಯ ಹರಿಸುತ್ತಿದ್ದ 10 ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ, ಗೋವಿಂದ ಸಾಲ್ವೆಂಟ್ ತ್ಯಾಜ್ಯ ಸಂಸ್ಕರಣಾ ಘಟಕದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಇನ್ನು ಮುಂದೆ ಯಾವುದೇ ಕಾರ್ಖಾನೆಗಳಿಂದ ಕೆರೆಗೆ ತ್ಯಾಜ್ಯ ನೀರು ಹರಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಮಲಿನಗೊಂಡಿರುವ ಗೊಟ್ಟಿಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಲಾಗಿದೆ ಎಂದು ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಮಂಜುನಾಥ್ ತಿಳಿಸಿದರು.