ನಿಯಮ ಉಲ್ಲಂಘಿಸಿದ ಕಾರ್ಖಾನೆಗಳಿಗೆ ನೋಟಿಸ್

02M.D.R.1
Published on

ಮದ್ದೂರು: ತಾಲೂಕಿನ ಸೋಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಲವು ಕಾರ್ಖಾನೆಗಳಿಂದ ರಾಸಾಯಾನಿಕ ಮಿಶ್ರಿತ ನೀರು ಹಾಗೂ ತಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ಅಂತಹ ಕಾರ್ಖಾನೆಗಳಿಗೆ ಪಂಚಾಯಿತಿ ಆಡಳಿತ ಮಂಡಳಿ ತೀರ್ಮಾನದಂತೆ ನೋಟಿಸ್ ನೀಡಲಾಗಿದೆ ಎಂದು ಗ್ರಾ.ಪಂ. ಅಧಿಕಾರಿ ಶುಂಭುಲಿಂಗಯ್ಯ ತಿಳಿಸಿದರು.

ಸೋಮವಾರ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ಸಾಯಿ ಇಂಡಸ್ಟ್ರೀಯಲ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೋಟಿಸ್ ಜಾರಿಗೆ ಮಾಡಿ ಮಾತನಾಡಿದರು. ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ಸಾಯಿ ಇಂಡಸ್ಟ್ರೀಯಲ್ಸ್, ಆರ್ಕೆಮ್ ಆರ್ಗ್ಯಾನಿಕ್ಸ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್, ಮಂಜುನಾಥ ಇಂಡಸ್ಟ್ರೀಯಲ್ಸ್ ಹಾಗೂ ಬಾಲಾಜಿ ಪೇಪರ್ ಮಾರ್ಟ್‌ ಕಾರ್ಖಾನೆಗಳು ರಾಸಾಯಾನಿಕ ಮಿಶ್ರಿತ ನೀರನ್ನು ಶುದ್ಧಿಕರಣ ಮಾಡದೆ ಹೊರಗಡೆ ಬಿಡುತ್ತಿದ್ದಾರೆ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದರು.

ಕೈಗಾರಿಕಾ ಪ್ರದೇಶದಲ್ಲಿ ಸುಮಾರು 75 ಕಾರ್ಖಾನೆಗಳ ಪೈಕಿ 45 ಕಾರ್ಖಾನೆಗಳು ಚಾಲ್ತಿಯಲ್ಲಿದ್ದು, ಎಲ್ಲವೂ ಕೆಮಿಕಲ್ ಮಿಶ್ರಿತ ನೀರನ್ನು ಹೇಗೆ ಶುದ್ಧಿಕರಣ ಮಾಡುತ್ತಿದ್ದೀರಿ, ಎಲ್ಲಿಗೆ ಹರಿಸುತ್ತಿದ್ದೀರಿ ಮತ್ತು ತ್ಯಾಜ್ಯ ವಸ್ತುಗಳನ್ನು ಎಲ್ಲಿಗೆ ಹಾಕುತ್ತಿದ್ದೀರಿ ಎಂಬ ಬಗ್ಗೆ ನೋಟಿಸ್ ಜಾರಿಗೆ ಮಾಡಿದ್ದು, 3 ದಿನಗಳಲ್ಲಿ ಉತ್ತರ ನೀಡದೆ ಹೋದರೆ ಅಂತಹ ಕಾರ್ಖಾನೆಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶ್ರೀ ಸಾಯಿ ಇಂಡಸ್ಟ್ರೀಯಲ್ಸ್ ಆಡಳಿತ ಮಂಡಳಿಯವರು ಕಾರ್ಖಾನೆಯ ಕೆಮಿಕಲ್ ನೀರನ್ನು ಭಾನುವಾರ ತಡರಾತ್ರಿ ಸೋಮನಹಳ್ಳಿಯಲ್ಲಿರುವ ಶಾಸಕರ ಜಾಗದಲ್ಲಿ ಹಾಕಿರುವುದರಿಂದ ಇಲ್ಲಿನ ವಾತಾವರಣ ಗಬ್ಬೆದ್ದು ನಾರುವ ಜತೆಗೆ ನಿವಾಸಿಗಳಿಗೆ ಅನಾರೋಗ್ಯ ಭೀತಿ ಎದುರಾಗಿದೆ. ಆದ್ದರಿಂದ ಮುಂದೆ ಈ ರೀತಿ ಎಲ್ಲಿಯೂ ಕೆಮಿಕಲ್ ಮಿಶ್ರಿತ ನೀರನ್ನು ಹಾಕಬಾರದು ಎಂದು ನೋಟಿಸ್ ಜಾರಿ ಮಾಡಲಾಗಿದೆ. ಗಿರೀಶ್ ಗಾರ್ಮೆಂಟ್ಸ್ ಕಾರ್ಖಾನೆಯ ಆಡಳಿತ ಮಂಡಳಿಯವರು ಪೈಪ್‌ಲೈನ್ ಮೂಲಕ ಕಲುಷಿತ ನೀರನ್ನು ನಾಲೆಗೆ ಹರಿಸಿದ್ದು, ಇದರಿಂದಲ್ಲೂ ಈ ಭಾಗದ ಜನರಿಗೆ ರೋಗದ ಆತಂಕ ಉಂಟಾಗಿದೆ. ಆದ್ದರಿಂದ ಇವರಿಗೂ ನೋಟಿಸ್ ನೀಡಲಾಗುವುದು ಎಂದರು.

ಹಲವಾರು ಕಾರ್ಖಾನೆಗಳು ಪಂಚಾಯಿತಿಗೆ ನಿಗದಿತವಾಗಿ ತೆರಿಗೆ ಕಟ್ಟುತ್ತಿಲ್ಲ. ಕೆಲವು ಕಾರ್ಖಾನೆಗಳು ಪರವಾನಗೆ ನವೀಕರಣ ಮಾಡಿಲ್ಲ. ಶೌಚಗೃಹದ ನೀರನ್ನು ಎಲ್ಲಿಗೆ ಹರಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಪಂಚಾಯಿತಿಯಲ್ಲಿ ಸಭೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಸಾಯಾನಿಕ ಮಿಶ್ರಿತ ನೀರನ್ನು ತುಳಿದು ಕೆಲ ತಿಂಗಳ ಹಿಂದೆ ಸೋಮನಹಳ್ಳಿ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ವೇಳೆ ರೈತ ಪ್ರಕಾಶ್ ಅವರ ಕಾಲಿಗೆ ತೀವ್ರ ಗಾಯವಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇತ್ತೀಚೆಗೆ ಕೆಮಿಕಲ್ ಮಿಶ್ರಿತ ನೀರು ಕುಡಿದು 23 ಕುರಿಗಳು ಸಾವನ್ನಪ್ಪಿವೆ. ಕೆಮಿಕಲ್ ಮಿಶ್ರಿತ ನೀರನ್ನು ಚರಂಡಿ, ನಾಲೆಗಳಲ್ಲಿ ಬಿಡುವುದರಿಂದ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಪಂ ಸದಸ್ಯ ತೈಲೂರು ಸ್ವಾಮಿ, ಕರ ವಸೂಲಿಗಾರ ಶಿವರಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net