

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ 3.75 ಲಕ್ಷ ಸುಸ್ತಿದಾರಿಗೆ ನೋಟಿಸ್ ಜಾರಿ ಮಾಡಿ ಬಾಕಿ ಟ್ಯಾಕ್ಸ್ ವಸೂಲು ಮಾಡುವಂತೆ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಲು ಹೆಚ್ಚು ಆದ್ಯತೆ ನೀಡುತ್ತಿದ್ದು, ಇನ್ನೂ ಪರಿಣಾಮಕಾರಿಯಾಗಿ ತೆರಿಗೆ ಸಂಗ್ರಹಿಸಬೇಕಿದೆ. ಅಂದಾಜು 3.75 ಲಕ್ಷ ಸುಸ್ತಿದಾರರು 800 ಕೋಟಿ ರೂ. ಬಾಕಿ ಪಾವತಿಸಬೇಕಿದ್ದು, ಎಸ್‌ಎಂಎಸ್ ಹಾಗೂ ಇ-ಮೇಲ್ ಮೂಲಕ ನೋಟೀಸ್ ಜಾರಿ ಮಾಡಬೇಕು. ಎಲ್ಲ ವಲಯಗಳಲ್ಲೂ ತೆರಿಗೆ ವಸೂಲಿಗೆ ಆದ್ಯತೆ ನೀಡುವಂತೆ ನಿದೇರ್ಶಿಸಿದರು.
ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚಿರಿ:
ನಗರದಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರೋಡ್‌ಗಳಲ್ಲಿ ಆದ್ಯತೆಯ ಮೇಲೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ವಾರ್ಡ್ ರಸ್ತೆಗಳಲ್ಲಿಯೂ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಮಳೆಗಾಲದ ವೇಳೆ ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಬಳಸಿಕೊಂಡು ಗುಂಡಿ ಮುಚ್ಚುವ ಕಾರ್ಯವನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಡೆಂಘೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:
ನಗರದಲ್ಲಿ ಡೆಂಘೆ ಪ್ರಕರಣಗಳನ್ನು ನಿಯಂತ್ರಿಸಬೇಕು. ಕಳೆದೊಂದು ವಾರದಲ್ಲಿ 69 ಪ್ರಕರಣಗಳು ಪತ್ತೆಯಾಗಿದ್ದು, ಜುಲೈ ತಿಂಗಳಲ್ಲಿ 442 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಜನವರಿಯಿಂದ ಈವರೆಗೆ 1,685 ಪ್ರಕರಣಗಳು ಪತ್ತೆಯಾಗಿದೆ. ಹಾಗಾಗಿ ಲಾರ್ವಾ ಉತ್ಪತ್ತಿ ಆಗುವ ತಾಣಗಳನ್ನು ಗುರುತಿಸಿ ಔಷಧಿ ಸಿಂಪಡಿಸಿ ನಿರ್ಮೂಲನೆ ಮಾಡಬೇಕು. ಜತೆಗೆ ಡೆಂಘೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಸ್ವಯಂಸೇವಕರನ್ನು ನಿಯೋಜಿಸಿಕೊಂಡು, ಮನೆ-ಮನೆಗೆ ಭೇಟಿ ನೀಡಿ ಅರಿವು ಮೂಡಿಸುವಂತೆ ಸಲಹೆ ನೀಡಿದ್ದಾರೆ.
ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಕರೀಗೌಡ, ಡಾ. ಕೆ ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ಎಲ್ಲ ವಲಯಗಳ ಆಯುಕ್ತರು, ಮುಖ್ಯ ಅಭಿಯಂತರರು ಉಪಸ್ಥಿತರಿದ್ದರು.
ಅಪಾಯಕಾರಿ ಮರ, ಕೊಂಬೆ ತೆರವುಗೊಳಿಸಿ:
ಮಳೆಗಾಲ ಹಿನ್ನೆಲೆ ನಗರದಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ, ಕೊಂಬೆಗಳನ್ನು ತೆರವುಗೊಳಿಸಬೇಕು. ಸಹಾಯ ತಂತ್ರಾಂಶದಲ್ಲಿ ಮರದ ಕೊಂಬೆಗಳನ್ನು ಕಟಾವು ಮಾಡಲು ಬಂದಿರುವ ದೂರುಗಳಿಗೆ ಸ್ಪಂದಿಸಿ ಕೊಂಬೆಗಳನ್ನು ಕಟಾವು ಮಾಡಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.