ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಪರ್ಯಾಯ ಮಾರ್ಗ ಬಳಸಲು ಸೂಚನೆ

Vijayavani-logo
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ತಲುಪಲು ಬಳಸುವ ಏರ್‌ಪೋರ್ಟ್ ರಸ್ತೆ ಮಾಗದ ಹೆಬ್ಬಾಳ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಿರುವ ನಾಲ್ಕು ತಿಂಗಳ ಕಾಲ ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕೆಲ ದಿನಗಳಲ್ಲಿ ಕೆ.ಆರ್.ಪುರ ಕಡೆಯಿಂದ ನಗರದತ್ತ ಪ್ರವೇಶ ಕಲ್ಪಿಸುವ ಲೂಪ್‌ಅನ್ನು ತೆಗೆದುಹಾಕಲಾಗುತ್ತದೆ. ಇದರಿಂದ ಆ ಭಾಗದಿಂದ ನಗರದತ್ತ ಬರಲು ಸಾಧ್ಯವಾಗದ ಕಾರಣ ಈ ಮಾರ್ಗವಾಗಿ ಬರುವ ವಾಹನ ಸವಾರರು ಐಒಸಿ-ಮುಕುಂದ ಚಿತ್ರಮಂದಿರ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗವಾರ-ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬೇಕಾಗುತ್ತದೆ. ಇದೇ ರೀತಿ ಹೆಗಡೆನಗರ, ಥಣಿಸಂದ್ರ ಕಡೆಯಿಂದ ಬರುವ ಸಾರ್ವಜನಿಕರು ಜಿಕೆವಿಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದಾಗಿದೆ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಮುಂದಿನ ನಾಲ್ಕು ತಿಂಗಳ ಕಾಲ ಈ ಬದಲಿ ವ್ಯವಸ್ಥೆ ಜಾರಿಯಲ್ಲಿದ್ದು, ನಾಗರಿಕರು ಸಹಕರಿಸಬೇಕಾಗಿ ಟ್ರಾಫಿಕ್ ಪೊಲೀಸರು ವಿನಂತಿಸಿದ್ದಾರೆ.

ಕುಂಟುತ್ತಾ ಸಾಗಿರುವ ಕಾಮಗಾರಿ:

ಹೆಬ್ಬಾಳ ಮೇಲ್ಸೇತುವೆಯ ವಿಸ್ತರಣಾ ಕಾಮಗಾರಿ 2023ರ ಜ.1ರಂದು ಕೈಗೆತ್ತಿಕೊಳ್ಳಲಾಗಿದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಬಿಡಿಎ ಹೇಳಿದ್ದರೂ, ಇವರೆಗೆ ಶೇ.20 ಪ್ರಮಾಣದ ಕೆಲಸ ಆಗಿಲ್ಲ. ಟ್ರಾಫಿಕ್ ಮಧ್ಯೆ ಕಾಮಗಾರಿ ನಡೆಸಬೇಕಿರುವುದು ಸೇರಿದಂತೆ ವಿವಿಧ ಕಾರಣದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ವಿವಿಧ ಭಾಗಗಳಲ್ಲಿ ಏಕ ಕಾಲದಲ್ಲಿ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯವಾಗದ ಕಾರಣ ಯೋಜನೆ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ.

ಸದ್ಯ ನಗರದೊಳಕ್ಕೆ ಬರಲು ಅನುಕೂಲವಾಗುವಂತೆ ಹೆಬ್ಬಾಳ ಪೊಲೀಸ್ ಠಾಣೆ ಮುಂದೆ ಹಾದುಹೋಗಲಿರುವ ರಾಂಪ್​​ನ 6 ಪಿಲ್ಲರ್‌ಗಳು ಮಾತ್ರ ನಿರ್ಮಾಣವಾಗಿವೆ. ಅವುಗಳ ಮೇಲೆ ಗರ್ಡರ್ ಇನ್ನಷ್ಟೇ ಅಳವಡಿಸಬೇಕಿದ್ದು, ಕೆ.ಆರ್.ಪುರ ಕಡೆಯಿಂದ ಪೂರ್ಣ ರಾಂಪ್ ನಿರ್ಮಿಸುವ ಕೆಲಸ ನಿಧಾನಗೊಂಡಿದೆ. ಇದಕ್ಕೆ ಸಂಚಾರ ಪೊಲೀಸರು ಅನುಮತಿ ನೀಡದಿದ್ದಕ್ಕೆ ಕಾರಣವಾಗಿತ್ತು. ಇಲ್ಲಿನ ದಟ್ಟಣೆ ಅವಧಿಯಲ್ಲಿ ವಾಹನಗಳನ್ನು ಬೇರೆ ಮಾರ್ಗದತ್ತ ತಿರುಗಿಸಲು ಸಾಧ್ಯವಾಗದ ಕಾರಣ ಅನುಮತಿ ನೀಡಲು ವಿಳಂಬವಾಗಿದೆ ಎಂಬ ಮಾತು ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net