

ಬೆಂಗಳೂರು: ಮೇಖ್ರಿ ವೃತ್ತದ ಕೆಳಸೇತುವೆಯಲ್ಲಿ ಸಂಭವಿಸಿದ್ದ ಸರಣಿ ಅಪಘಾತಕ್ಕೆ ಕಾರಣವಾದ ಐಷರಾಮಿ ಬೆಂಟ್ಲಿ ಕಾರು ಚಲಾಯಿಸಿದ್ದು ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲ್ಪಾಡ್ ಎಂಬುದು ಪೊಲೀಸರ ತನಿಖೆಯಲ್ಲಿ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಖುದ್ದಾಗಿ ವಿಚಾರಣೆಗೆ ಹಾಜರಾಗಲು ಅವರಿಗೆ ಸದಾಶಿವನಗರ ಸಂಚಾರ ಪೊಲೀಸರು ನೋಟಿಸ್ ನೀಡಿದ್ದಾರೆ.
ಭಾನುವಾರ (ಫೆ.9) ಮಧ್ಯಾಹ್ನ 2.30ರಲ್ಲಿ ಹೆಬ್ಬಾಳದ ಕಡೆಯಿಂದ ಅತಿವೇಗವಾಗಿ ಬಂದ ಬೆಂಟ್ಲಿ ಕಾರು ಚಾಲಕ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋರಿಕ್ಷಾ ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಬೈಕ್ ಸವಾರ ಪ್ರಫುಲ್ಕುಮಾರ್ (50) ಹಾಗೂ ಆಟೋದಲ್ಲಿದ್ದ ಮಹಿಳೆ ಸಬೀಹಾ ಗಾಯ ಗೊಂಡಿದ್ದರು. ಪೊಲೀಸರು ಬರುವಷ್ಟರಲ್ಲಿ ನಲ್ಪಾಡ್ ಸಂಬಂಧಿ ಮೊಹಮ್ಮದ್ ನಫಿ ಹಾಗೂ ಬಾಡಿಗಾರ್ಡ್ ಬಾಲಕೃಷ್ಣ ಜತೆ ಪರಾರಿಯಾಗಿದ್ದರು.
ಸಿಸಿ ಕ್ಯಾಮರಾದಲ್ಲಿ ದೃಶ್ಯ!: ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು, ಅಪಘಾತ ಸ್ಥಳದ ಸುತ್ತಮುತ್ತಲ ರಸ್ತೆಗಳಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ನಲ್ಪಾಡ್ ಬಾಡಿಗಾರ್ಡ್ ಜತೆ ಶಂಕಾಸ್ಪದವಾಗಿ ಓಡಿಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಪ್ರತ್ಯಕ್ಷದರ್ಶಿಗಳು ನಲ್ಪಾಡ್ರನ್ನು ಗುರುತಿಸಿದ್ದರು.
ಅಜಾಗರೂಕತೆಯ ಕಾರು ಚಾಲನೆ: ಪ್ರಾಥಮಿಕ ತನಿಖೆಯಲ್ಲಿ ಕಾರು ಅತಿವೇಗದಲ್ಲಿದ್ದುದು ಗೊತ್ತಾಗಿದೆ. ಸಾರ್ವಜನಿಕರ ಪ್ರಾಣಹಾನಿ ಉಂಟಾಗುವಂತೆ ಅಜಾಗರೂಕತೆಯಿಂದ ಕಾರು ಚಲಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನಲ್ಪಾಡ್ಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ಬಿ.ಆರ್. ರವೀಕಾಂತೇ ಗೌಡ ತಿಳಿಸಿದ್ದಾರೆ.
ನುಣುಚಿಕೊಳ್ಳಲು ಹೈಡ್ರಾಮಾ!: ಅಪಘಾತ ಎಸಗಿದ್ದು ತಾನೇ ಎಂಬುದು ಬಹಿರಂಗವಾಗುತ್ತಿದ್ದಂತೆ ಪ್ರಕರಣದಿಂದ ನುಣುಚಿಕೊಳ್ಳಲು ನಲ್ಪಾಡ್ ಹೈಡ್ರಾಮಾ ಮಾಡಿದ್ದಾನೆ. ಸದಾಶಿವನಗರ ಸಂಚಾರ ಠಾಣೆ ಪೊಲೀಸರ ಮುಂದೆ ತನ್ನ ಗನ್ವ್ಯಾನ್ ಬಾಬು ಎಂಬಾತನನ್ನು ಹಾಜರುಪಡಿಸಿ, ತಾನೇ ಅಪಘಾತ ಮಾಡಿದ್ದಾಗಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದ. ಆದರೆ, ಈ ವ್ಯಕ್ತಿಗೂ ಹಾಗೂ ಅಪಘಾತ ಎಸಗಿದ ಕಾರು ಚಾಲಕನ ಚಹರೆಗೂ ಹೋಲಿಕೆಯಲ್ಲಿ ವ್ಯತ್ಯಾಸ ಇರುವುದು ಕಂಡು ಬಂದಿದೆ. ಸದಾಶಿವ ನಗರ ಠಾಣೆಯಲ್ಲಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ನಲ್ಪಾಡ್ ಅವಾಂತರ ಮೊದಲಲ್ಲ!
ಮೊಹಮ್ಮದ್ ನಲ್ಪಾಡ್ 2018ರಲ್ಲಿ ತನ್ನ ಸಹಚರರ ಜತೆಗೂಡಿ ಯುಬಿ ಸಿಟಿ ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ 118 ದಿನಗಳವರೆಗೆ ಜೈಲಿನಲ್ಲಿದ್ದರು. ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಇದೀಗ ಸರಣಿ ಅಪಘಾತ ಪ್ರಕರಣದಲ್ಲಿ ಸಿಲುಕಿದ್ದಾರೆೆ.
ನಲ್ಪಾಡ್ನಿಂದ ಅಪಘಾತ ಆಗಿರುವುದು ದೊಡ್ಡ ವಿಚಾರ ಅಲ್ಲ. ಅದೊಂದು ಆಕಸ್ಮಿಕ. ವಿನಾಕಾರಣ ರಾಜಕೀಯ ಮಾಡಲಾಗುತ್ತಿದೆ. ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡುತ್ತಾರೆ. | ದಿನೇಶ್ ಗುಂಡುರಾವ್ ಕೆಪಿಸಿಸಿ ಅಧ್ಯಕ್ಷ