

ಕಡೂರು: ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಬದ್ದನಾಗಿದ್ದೇನೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು. ನಿಡಘಟ್ಟ ಗ್ರಾಪಂ ವ್ಯಾಪ್ತಿಯ ಕರೇಕಲ್ಲಹಳ್ಳಿ ಗ್ರಾಮದಲ್ಲಿ ಹಾನಿಯಾದ ಮನೆಗಳಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿ, ಮುಂಗಾರು ಮಳೆಯಿಂದಕಡೂರು ತಾಲೂಕು ವ್ಯಾಪ್ತಿಯಲ್ಲಿಯಾದ ಹಾನಿ ಪ್ರಮಾಣದ ಬಗ್ಗೆ ವರದಿ ನೀಡುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಳೆದ ವಾರದಲ್ಲಿ ನಿರಂತರ ಸುರಿದ ಮಳೆ, ಗಾಳಿಗೆ ನಿಡಘಟ್ಟ ಭಾಗದ ಸುತ್ತಮುತ್ತಲ ಪ್ರದೇಶಗಳ ಏಳೆಂಟು ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಅಂಗವಿಕಲ ಸಂತ್ರಸ್ತ ಸ್ವಾಮಿ ಅವರು ವಾಸಿಸಲು ಸ್ಥಳವಿಲ್ಲದೆ ದೇವಾಲಯದ ಎದುರು ವಾಸಿಸುತ್ತಿದ್ದಾರೆ. ಆದ್ದರಿಂದ ಹಾನಿ ಪ್ರಮಾಣಕ್ಕೆ ದೊರಕಬೇಕಾದ ಪರಿಹಾರವನ್ನು ಕೂಡಲೇ ದೊರಕಿಸಿಕೊಡಬೇಕು ಎಂದು ದೂರವಾಣಿ ಮೂಲಕ ಪ್ರಭಾರ ತಹಸೀಲ್ದಾರ್ ಮಂಜುನಾಥಸ್ವಾಮಿಗೆ ಸೂಚಿಸಿದರು.
ನಂತರ ನಿಡಘಟ್ಟ ಗ್ರಾಮಕ್ಕೆ ತೆರಳಿ ಹಾನಿಗೊಂಡ ಮನೆಗಳನ್ನು ವೀಕ್ಷಿಸಿದರು. ವಿದ್ಯುತ್ ತಗುಲಿ ಸಾವನ್ನಪ್ಪಿದ ಮಹಿಳೆ ನೇತ್ರಾವತಿ ಎಂಬುವವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಸ್ಥಳದಲ್ಲಿದ್ದ ಮೆಸ್ಕಾಂ ಅಧಿಕಾರಿಗಳಿಗೆ ನಿಗಮದ ಪರಿಹಾರ ದೊರಕಿಸಿಕೊಡುವಂತೆ ನಿರ್ದೇಶನ ನೀಡಿದರು. ಸಖರಾಯಪಟ್ಟಣ ಕಂದಾಯ ನಿರೀಕ್ಷಕ ಜಿತೇಂದ್ರ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಗ್ರಾಪಂ ಅಧ್ಯಕ್ಷ ರಾಜು, ಸದಸ್ಯರಾದ ಕುಮಾರಪ್ಪ, ಸಣ್ಣಪ್ಪ, ಮುಖಂಡರಾದ ನಿಡಘಟ್ಟ ಸಂತೋಷ್, ಕುಮಾರ್ ಮತ್ತಿತರಿದ್ದರು.