ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಸೂಚನೆ

raichur
raichur
Published on

ರಾಯಚೂರು ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ಉಡಾಫೆ ಮಾಡದೇ ಶೀಘ್ರ ಉತ್ತರ ನೀಡಿ ಅರ್ಜಿಗಳನ್ನು ವಿಲೇ ಮಾಡಬೇಕೆಂದು ಪೀಠ ಸಂಖ್ಯೆ 04ರ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟಿ ಹಾಗೂ ಪೀಠ ಸಂಖ್ಯೆ 05ರ ರಾಜಶೇಖರ ಎಸ್ ಅವರು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ರುದ್ರಣ್ಣ ಹರ್ತಿಕೋಟಿ, ಆಯೋಗವು ಮಾಹಿತಿ ಹಕ್ಕು ಕಾಯಿದೆಯನ್ವಯ ನಿಯಮದಂತೆ 30 ದಿನಗಳಲ್ಲಿ ಮಾಹಿತಿ ನೀಡಿದಿದ್ದರೆ ಉಚಿತವಾಗಿ ನೀಡಬೇಕಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗುತ್ತದೆ. ಆದ್ದರಿಂದ ಲಭ್ಯವಿರುವ ಮಾಹಿತಿ ಕೊಡಬೇಕು. ಯಾವುದನ್ನು ಸಹ ಕ್ರೋಢಿಕರಿಸಿ ನೀಡಬೇಕಾಗಿಲ್ಲ ಎಂದು ತಿಳಿಸಿದರು.

ಸಾರ್ವಜನಿಕ ಪ್ರಾಧಿಕಾರಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ನೇಮಕವಾಗಿರುತ್ತಾರೆ. ಆ ಮಾಹಿತಿ ಅಧಿಕಾರಿಯು ಮೊದಲು ಯಾವುದು ಮಾಹಿತಿ, ಯಾವುದು ಮಾಹಿತಿಯಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅರ್ಜಿಗಳಿಗೆ ನಿಗದಿತ ಕಾಲಾವಧಿಯಲ್ಲಿ ಮಾಹಿತಿ ನೀಡಿದರೆ ಅದರಿಂದ ಬ್ಲಾಕ್ ಮೇಲಗರ್‌ಗಳು ಹುಟ್ಟಿಕೊಳ್ಳುವುದಿಲ್ಲ. ನಿಮ್ಮಲ್ಲಿ ಲಭ್ಯವಿರುವ ಮಾಹಿತಿಯನ್ನು ಮೊದಲು ನೀಡಿ, ಯಾವುದೇ ಅರ್ಜಿಯ ಬಗ್ಗೆ ಉದಾಸೀನ ಮಾಡಲು ಹೋಗಬೇಡಿ ಎಂದು ತಿಳಿಸಿದರು. ರಾಜ್ಯ ಮಾಹಿತಿ ಆಯೋಗವು ಗಮನಿಸಿದಂತೆ ಅನೇಕ ಪಿಐಒಗಳು ನಿಯಮಗಳನ್ನು ಸರಿಯಾಗಿ ಓದುವುದಿಲ್ಲ. ಹೀಗೆ ಆಗಬಾರದು ಎಚ್ಚರಿಕೆ ನೀಡಿದರು.

ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸದಿದ್ದ ಪಕ್ಷದಲ್ಲಿ ಮಾಹಿತಿ ಒದಗಿಸದ ಅಧಿಕಾರಿಗಳ ಮೇಲೆ ದಂಡ ವಿಧಿಸಲು ಕಾಯಿದೆಯಲ್ಲಿಯೇ ಅವಕಾಶವಿದೆ. ಒಂದು ದಿನಕ್ಕೆ 250 ರೂ. ದಂತೆ 100 ದಿನಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ಮಾಹಿತಿ ಒದಗಿಸಲು ವಿಳಂಬ ಮಾಡಿರುವುದು ಗೊತ್ತಾದಲ್ಲಿ ಕನಿಷ್ಟ 25 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಅರ್ಜಿದಾರರಿಗೆ ನಷ್ಟವಾಗಿದ್ದಲ್ಲಿ ಪರಿಹಾರ ಕೂಡ ಕೊಡಿಸಬಹುದಾಗಿದೆ. ಅರ್ಜಿದಾರರಿಗೆ 1 ಲಕ್ಷ ರೂ.ವರೆಗೆ ಪರಿಹಾರ ಕೊಡಿಸಿದ ಉದಾಹರಣೆಗಳಿವೆ. ಈ ರೀತಿಯ ದಂಡ ವಿಧಿಸಿದ ಪ್ರಕರಣಗಳು ಆಯೋಗದಲ್ಲಿ ಸಾಕಷ್ಟಿವೆ ಎಂದು ತಿಳಿಸಿದರು.


ಅರ್ಜಿದಾರರು ಕೇಳಿದಾಕ್ಷಣ ನಾವು ದಂಡ ವಿಧಿಸುವುದಿಲ್ಲ. ಅಧಿಕಾರಿಗಳಿಗೆ ಮೂರು ಬಾರಿ ಅವಕಾಶ ಕೊಡುತ್ತೇವೆ. ಮೂರು ಬಾರಿಯು ಅವರು ಬರದೇ ಇದ್ದಾಗ, ಮಾಹಿತಿಯನ್ನು ಕೊಡದೇ ಇದ್ದಾಗ ಮಾತ್ರ ದಂಡ ಹಾಕುವ ಪ್ರಯೋಗ ನಡೆಯುತ್ತದೆ. ದಂಡ ಹಾಕಿದಲ್ಲಿ ಅದು ಆಯಾ ನೌಕರರ ಸೇವಾ ಪುಸ್ತಕದಲ್ಲಿ ದಾಖಲಾಗುತ್ತದೆ. ಅವರ ಸಂಬಳದಲ್ಲಿ ಹಣ ಕಡಿತವಾಗುತ್ತದೆ. ಸೇವಾ ಪುಸ್ತಕದಲ್ಲಿ ಇದು ದಾಖಲಾದಲ್ಲಿ ಮುಂದೆ ನಿವೃತ್ತಿ ಕಾಲದಲ್ಲಿ ಪಿಂಚಣಿಗೆ ಸಮಸ್ಯೆಯಾಗಲಿದೆ. ಮಾಹಿತಿ ಹಕ್ಕಿನಡಿ ಬರುವ ಅರ್ಜಿಗಳಿಗೆ ಸಕಾಲಕ್ಕೆ ಮಾಹಿತಿ ಒದಗಿಸದೇ ದಂಡ ಕಟ್ಟಿ ಅದು ಆ ನೌಕರರ ಎಸ್‌ರ್‌ನಲ್ಲಿ ದಾಖಲಾಗಿ ಪಿಂಚಣಿಗೆ ಸಮಸ್ಯೆಯಾದ ಪ್ರಕರಣಗಳು ಕೂಡ ಆಯೋಗದಲ್ಲಿ ದಾಖಲಾಗಿವೆ. ಈ ಬಗ್ಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಅರಿತು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಕೆಲವು ಪ್ರಕರಣಗಳಲ್ಲಿ ಹಣ ಹೆಚ್ಚಿಗೆ ಕಟ್ಟಿಸಿಕೊಂಡು ಕಡಿಮೆ ಪುಟ ಮಾಹಿತಿ ನೀಡಲಾಗುತ್ತದೆ. ಇದು ತಪ್ಪಾಗುತ್ತದೆ. ನಕ್ಷೆ ಕೇಳಿದಾಗ ಕೇವಲ ಔಟ್‌ಲೈನ್ ಮಾತ್ರ ನೀಡಬೇಕು. ಮೂರನೇ ವ್ಯಕ್ತಿಯ ಮಾಹಿತಿ ಕೇಳಿದ್ದರೆ ಐದು ದಿನಗಳಲ್ಲಿ ಆ ವ್ಯಕ್ತಿಗೆ ನೊಟೀಸ್ ನೀಡಿ ಮಾಹಿತಿ ನೀಡಬಹುದೇ ಅಥವಾ ಬೇಡವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಪೀಠ ಸಂಖ್ಯೆ 05ರ ರಾಜ್ಯ ಮಾಹಿತಿ ಆಯುಕ್ತ ರಾಜಶೇಖರ ಎಸ್ ಮಾತನಾಡಿ, ಮಾಹಿತಿ ಹಕ್ಕು ಅರ್ಜಿ ಸ್ವೀಕೃತಿಯಾದ ಕೂಡಲೇ ಆ ಬಗ್ಗೆ ನಿರ್ಲಕ್ಷ್ಯ ಮಾಡದೇ ವಿಲೇವಾರಿ ಮಾಡಲು ನಿಯಮಾನುಸಾರ ಕ್ರಮ ವಹಿಸಬೇಕು. ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಅದಕ್ಕೆ ಸೂಕ್ತ ಹಿಂಬರಹ ನೀಡಬೇಕು ಎಂದು ತಿಳಿಸಿದರು.

ಮಾಹಿತಿ ಹಕ್ಕು ಅರ್ಜಿ ಬಂದ ನಿಗದಿತ ಅವಧಿಯಲ್ಲಿ ಉತ್ತರ ನೀಡಬೇಕು. ಅದರ ಪ್ರತಿಯನ್ನು ಆಯೋಗಕ್ಕು ಸಹ ಕಳುಹಿಸಬೇಕು. ಆನ್‌ಲೈನದಲ್ಲಿ ಬಂದಾಗ ಮಾಹಿತಿ ಕೊಟ್ಟಿರುವುದಾಗಿ ಹೇಳುತ್ತಾರೆ. ಆದರೆ ಕೊಟ್ಟಿರುವ ಮಾಹಿತಿಯನ್ನು ನಮಗೆ ಕಳುಹಿಸದ ಕಾರಣ ಆದೇಶ ಮಾಡಲು ಸಮಸ್ಯೆಯಾಗುತ್ತದೆ ಎಂಬುದನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಅರಿಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಇದ್ದರು.

ನಾನು ಅಧಿಕಾರಿ ವಹಿಸಿಕೊಂಡಗ ರಾಜ್ಯದಲ್ಲಿ ಸುಮಾರು 50 ಸಾವಿರ ಅರ್ಜಿಗಳು ಇದ್ದವು. ಕಳೆದ 5 ತಿಂಗಳಿನಿಂದ ನಿರಂತರವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸವನ್ನು ಕೈಗೊಂಡು ಮಾಹಿತಿ ಹಕ್ಕು ಅರ್ಜಿಗಳನ್ನು ವಿಲೇವರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ರಾಜ್ಯದಲ್ಲಿ ಬೆಂಗಳೂರು ಮೊದಲನೆ ಸ್ಥಾನವಿದ್ದರೆ, ರಾಯಚೂರು 4ನೇ ಸ್ಥಾನ ಪಡೆದುಕೊಂಡಿದೆ.

ರುದ್ರಣ್ಣ ಹರ್ತಿಕೋಟಿ ರಾಜ್ಯ ಮಾಹಿತಿ ಆಯುಕ್ತ ಪೀಠ ಸಂಖ್ಯೆ 04

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net