

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿತೆರಿಗೆ ಉಳಿಸಿಕೊಂಡಿರುವವರಿಗೆ ನೋಟಿಸ್ ನೀಡುತ್ತಿದ್ದು, ಈ ತಿಂಗಳ ಅಂತ್ಯದ ಬಳಿಕ ರಿಯಾಯಿತಿ ಸೌಲಭ್ಯ ಇರದು ಎಂದು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಪ್ರಸಕ್ತ ವರ್ಷ ತೆರಿಗೆ ಪಾವತಿಸಲು ಮೇ ಅಂತ್ಯದವರೆಗೆ ಮಾತ್ರ ಅವಕಾಶ ಇತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರ ಜು.31ರವರೆಗೆ ಸಮಯ ವಿಸ್ತರಿಸಿತ್ತು. ನೀತಿ ಸಂಹಿತೆ ಮುಕ್ತಾಯದ ಬಳಿಕ ತೆರಿಗೆ ವಸೂಲಾತಿಯನ್ನು ಚುರುಕುಗೊಳಿಸಲಾಗಿದೆ. ದೊಡ್ಡ ಮೊತ್ತ ಉಳಿಸಿಕೊಂಡಿರುವವರಿಗೆ ಮಾತ್ರ ನೋಟಿಸ್ ಜಾರಿ ಮಾಡಿ ಬಾಕಿ ಮೊತ್ತ ವಸೂಲು ಮಾಡಲಾಗುತ್ತಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ತಮ್ಮ ಆಸ್ತಿ ದಾಖಲಾತಿಯ ವಿವರವನ್ನು ಪಾಲಿಕೆ ಅಧಿಕಾರಿಗಳಿಗೆ ಪ್ರದರ್ಶಿಸಿದರೆ ಅದನ್ನಾಧರಿಸಿ ರಿಯಾಯಿತಿ ಅಥವಾ ದಂಡದ ಹಣವನ್ನು ಮನ್ನಾ ಮಾಡಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ತೆರಿಗೆ ವ್ಯಾಪ್ತಿಗೆ ಸೇರಲು ಅವಕಾಶ:
ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ ಅಂದಾಜು 6 ಲಕ್ಷ ಸ್ವತ್ತುದಾರರು ಆಸ್ತಿತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಇಂತಹವರು ತಮ್ಮ ಸ್ವತ್ತು, ಕಟ್ಟಡದ ದಾಖಲೆ ಪತ್ರ ಹಾಗೂ ಇನ್ನಿತರ ಅಗತ್ಯ ಮಾಹಿತಿಯನ್ನು ಅನ್‌ಲೈನ್ ಮೂಲಕ ಬಿಬಿಎಂಪಿ ವೆಬ್‌ಸೈಟ್ ಮೂಲಕ ನಮೂನೆಯೊಂದಿಗೆ ತುಂಬಿಸಿ ತೆರಿಗೆ ಪಾವತಿಸಬಹುದು. ಇಂತಹವರ ಸ್ವತ್ತನ್ನು ಸ್ಥಳೀಯ ಕಂದಾಯ ಅಧಿಕಾರಿಗಳು ಪರಾಮರ್ಶಿಸಿ 3 ತಿಂಗಳೊಳಗೆ ಖಾತಾ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಈ ಸೌಲಭ್ಯವನ್ನು ಸ್ವತ್ತುದಾರರು ಬಳಸಿಕೊಳ್ಳಬೇಕು ಎಂದು ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.