ಅಕ್ರಮ ಇಟ್ಟಿಗೆ ತಯಾರಿಕೆ ಘಟಕ ಮಾಲೀಕರಿಗೆ ನೋಟಿಸ್

MND JCB
Published on

ಮುಂಡಗೋಡ: ಅಕ್ರಮ ಇಟ್ಟಿಗೆ ತಯಾರಿಕೆ ಘಟಕಗಳ (ಇಟ್ಟಂಗಿ ಭಟ್ಟಿ) ಮೇಲೆ ತಹಸೀಲ್ದಾರ್ ಸಿಬ್ಬಂದಿ ದಾಳಿ ನಡೆಸಿ ಇಟ್ಟಿಗೆ ತಯಾರಿಕೆ ಘಟಕದ ಮಾಲೀಕರಿಗೆ ನೋಟಿಸ್ ನೀಡಿ, ಜೆಸಿಬಿಯಿಂದ ಇಟ್ಟಿಗೆಗಳನ್ನು ನಾಶಪಡಿಸಿದ ಘಟನೆ ತಾಲೂಕಿನ ಓಣಿಕೇರಿಯಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಮಳಗಿ, ಹನುಮಾಪುರ, ಪಾಳಾ, ಮರಗಡಿ, ಭದ್ರಾಪುರ, ಓಣಿಕೇರಿ, ಓರಲಗಿ, ಆಲಳ್ಳಿ, ಸನವಳ್ಳಿ ಗ್ರಾಮಗಳ ಕೃಷಿ ಜಮೀನುಗಳಲ್ಲಿ ಯಾವುದೇ ಪರವಾನಗಿ ಪಡೆಯದೆ ಇಟ್ಟಿಗೆ ತಯಾರಿಕೆ ನಡೆಯುತ್ತಿದೆ.

ಭಟ್ಟಿಯಲ್ಲಿ ಇಟ್ಟಿಗೆ ತಯಾರಿಸಿ ಹೆಚ್ಚಿನ ದರಕ್ಕೆ ಅಕ್ಕಪಕ್ಕದ ಜಿಲ್ಲೆ ಹಾಗೂ ತಾಲೂಕುಗಳಿಗೆ ಮಾರಾಟಕ್ಕೆ ಕಳುಹಿಸಲಾಗುತ್ತದೆ. ತಾಲೂಕಿನ ವಿವಿಧ ಭಾಗಗಳಿಗೆ ಸೋಮವಾರ ಹಾಗೂ ಮಂಗಳವಾರ ಭೇಟಿ ನೀಡಿದ ತಹಸೀಲ್ದಾರ್ ಶಂಕರ ಗೌಡಿ, ಅಕ್ರಮ ಇಟ್ಟಿಗೆ ತಯಾರಿಕೆ ಘಟಕಗಳನ್ನು ಪರಿಶೀಲಿಸಿ ಅವುಗಳ ಮಾಲೀಕರಿಗೆ ನೋಟಿಸ್ ನೀಡಿದರು. ಓಣಿಕೇರಿ ಮರಗಡಿ ಭಾಗದ ಹತ್ತಕ್ಕೂ ಹೆಚ್ಚು ಇಟ್ಟಿಗೆ ತಯಾರಿಕೆ ಘಟಕಗಳಿಗೆ ಜೆಸಿಬಿ ನುಗ್ಗಿಸಿ ಅಲ್ಪ ಪ್ರಮಾಣದ ಇಟ್ಟಿಗೆಗಳನ್ನು ನಾಶಪಡಿಸುವ ಮೂಲಕ ಇಟ್ಟಿಗೆ ತಯಾರಿಕೆ ಘಟಕಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಕಾನೂನಿನ ಪ್ರಕಾರ ಅನುಮತಿ ಪಡೆದು ಇಟ್ಟಿಗೆ ತಯಾರಿಸಬೇಕು. ಕೃಷಿ ಜಮೀನಿನಲ್ಲಿ ಅಕ್ರಮ ಇಟ್ಟಿಗೆ ತಯಾರಿಕೆಗೆ ಅನುಮತಿ ಇಲ್ಲ. ಪ್ರತಿವರ್ಷವೂ ನೋಟಿಸ್ ನೀಡಿದರೂ ಇದೆ ರೀತಿ ಮಾಡುತ್ತೀರಿ ಎಂದು ಪೊಲೀಸ್ ಬಂದೋಬಸ್ತ್​ನಲ್ಲಿ ಕೆಲವೆಡೆ ಇಟ್ಟಿಗೆಗಳನ್ನು ನಾಶ ಪಡಿಸಿ ಇನ್ಮುಂದೆ ಪರವಾನಗಿ ಪಡೆಯದೇ ಇಟ್ಟಿಗೆ ತಯಾರಿಸುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದರು.

ಪಾಳಾ ಕಂದಾಯ ನಿರೀಕ್ಷಕ ಬಸವರಾಜ ಬಿಸ್ನಳ್ಳಿ, ಗ್ರಾಮ ಸಹಾಯಕರಾದ ನಾರಾಯಣ ಕಲಾಲ, ಶಿವಾನಂದ ವಾಲಿಕಾರ, ರವಿ ಭಜಂತ್ರಿ, ಚಂದ್ರು ಮಳಗಿ, ನಿಸಾರ ಅಹ್ಮದ್​ಶೇಖ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net