

ಕುಶಾಲನಗರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ನದಿ ಉಕ್ಕಿ ಹರಿಯುತ್ತಿದೆ. ಕುಶಾಲನಗರ ನದಿ ತೀರದ ನಿವಾಸಿಗಳು ತಕ್ಷಣವೇ ತಮ್ಮ ಮನೆಗಳಲ್ಲಿ ಇರುವ ವಸ್ತುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಪುರಸಭೆಯು ಆಟೋ ಮೂಲಕ ಜಾಗೃತಿ ಮೂಡಿಸಲಾಗಿದೆ.
ಮುನ್ನೆಚ್ಚರಿಕೆಯಾಗಿ ಪುರಸಭೆಯ ವ್ಯಾಪ್ತಿಯ ನಿವಾಸಿಗಳು ಬೇರೆಡೆಗೆ ಸ್ಥಳಾಂತರವಾಗಲು ಹರಸಾಹಸಪಡುತ್ತಿದ್ದಾರೆ. ಕುಶಾಲನಗರ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಸೇರಿದಂತೆ ಹಲವು ಬಡಾವಣೆಗಳ ನಿವಾಸಿಗಳು ನಿತ್ಯ ಆತಂಕದಲ್ಲಿ ಬದುಕುತ್ತಿದ್ದಾರೆ.
ದುಬಾರೆ ಸಾಕಾನೆ ಶಿಬಿರದ ಭಾಗದಲ್ಲಿ ಕಾವೇರಿ ನದಿಯು ಭೋರ್ಗರೆಯುತ್ತಿರುವುದರಿಂದ ಪ್ರವಾಸಿಗರಿಗೆ ಬಂದ್ ಆಗಿದೆ. ಗುರುವಾರ ಪಾರ್ಕಿಂಗ್ ಸ್ಥಳದಲ್ಲಿ ನೀರು ತುಂಬಿದೆ. ದುಬಾರೆಯಲ್ಲಿ ರ‌್ಯಾಫ್ಟಿಂಗ್ ನಿಲ್ಲಿಸಲಾಗಿದೆ. ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ಹೋಗಲು ದೋಣಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.