ತಟ್ಟುಕಡಗಳ ಆಹಾರದಲ್ಲಿ ವಿಷಾಂಶ : ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ವಿಭಾಗದಿಂದ ತಪಾಸಣೆ : ಸ್ವಚ್ಛತಾ ಗುಣಮಟ್ಟ ಸುಧಾರಣೆಗೆ ನೋಟಿಸ್

New Project (38)
Published on

ಕಾಸರಗೋಡು: ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ವಿಭಾಗ ಮತ್ತು ನಗರಸಭೆ ವತಿಯಿಂದ ಆಹಾರ ಪದಾರ್ಥ ವಿತರಿಸುವ ತಟ್ಟುಕಡಗಳಲ್ಲಿ ತಪಾಸಣೆ ನಡೆಸಲಾಯಿತು. ಅಧಿಕಾರಿಗಳ ತಂಡ ರಾತ್ರಿ ವೇಳೆ ಕಾಸರಗೋಡಿನ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿತು. ನಗರಸಭೆಯ ವಿವಿಧ ಮಳಿಗೆಗಳಲ್ಲಿ ಸ್ವಚ್ಛತಾ ಪರಿಶೀಲನೆ ನಡೆಸಲಾಯಿತು. ಪರಿಶೀಲಿಸಲಾದ ಹನ್ನೆರಡು ಮಳಿಗೆಗಳಲ್ಲಿ ಏಳು ಮಳಿಗೆಗಳಿಗೆ ಸ್ವಚ್ಛತಾ ಗುಣಮಟ್ಟ ಸುಧಾರಿಸಲು ನೋಟಿಸ್ ನೀಡಲಾಯಿತು.

ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘಿಸಿದ ನಾಲ್ಕು ಮಳಿಗೆಗಳಿಗೆ ದಂಡ ವಿಧಿಸಲಾಯಿತು. ಬೀದಿ ವ್ಯಾಪಾರಿಗಳ ಬಗ್ಗೆ ಆರೋಗ್ಯ ಇಲಾಖೆಗೆ ಹಲವು ದೂರುಗಳು ಬಂದಿರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮದಾಸ್ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಹಾರದಲ್ಲಿ ವಿಷಾಂಶವಿರುವ ಪ್ರಕರಣ ವರದಿಯಾಗಿವೆ. ನಗರಸಭೆ ಮತ್ತು ಇತರ ಪ್ರಮುಖ ನಗರಗಳಲ್ಲಿ ರಾತ್ರಿ ವೇಳೆ ಅಂಗಡಿ ಮತ್ತು ಹೋಟೆಲ್‌ಗಳ ತಪಾಸಣೆ ನಡೆಸಲಾಗುತ್ತಿದ್ದು, ತಪಾಸಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ತಾಂತ್ರಿಕ ಸಹಾಯಕ ಆರ್.ಬಿಮಲ್‌ಭೂಷಣ್ ಮತ್ತು ಆಹಾರ ಸುರಕ್ಷತಾ ಅಧಿಕಾರಿ ಪಿ.ಬಿ.ಆದಿತ್ಯನ್, ಆರೋಗ್ಯ ಮೇಲ್ವಿಚಾರಕ ಎನ್.ಎ.ಶಾಜು, ಕ್ಲೀನ್ ಸಿಟಿ ವ್ಯವಸ್ಥಾಪಕ ಮಧುಸೂದನನ್, ಆರೋಗ್ಯ ನಿರೀಕ್ಷಕರಾದ ಪಿ.ವಿ.ಸಜೀವನ್, ಮಧು ಕೆ, ಜೆ.ಎಚ್.ಐ.ರಾಧಾಕೃಷ್ಣನ್ ಕೆ.ಜಿ, ಆಶಾ ಮೇರಿ, ಜಿ.ಬಿ.ಜಿ.ಆರ್, ಸುನೀಲ್‌ಕುಮಾರ್, ಜನಾರ್ದನನ್ ತಪಾಸಣಾ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net