

ಬೆಂಗಳೂರು: ಪಾಲಿಕೆಯಿಂದ ನೋಟಿಸ್ ಪಡೆದಿದ್ದ ಶಂಕರಪುರದ ಜ್ಞಾನೋದಯ ಶಾಲೆಯ ಮೇಲಿದ್ದ ಅನಧಿಕೃತ ಕಟ್ಟಡದ ತೆರವುಗೊಳಿಸುವ ತೂಗುಕತ್ತಿ ದೂರಸರಿದಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಗುರುವಾರ ಆದೇಶ ಹೊರಡಿಸಿದ್ದಾರೆ.
ಶೃಂಗೇರಿ ಮಠಕ್ಕೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿರುವ ಶಾಲೆ ಹಾಗೂ ಕಾಲೇಜು ಕಟ್ಟಡದಲ್ಲಿ ಒಂದಿಷ್ಟು ಭಾಗವು ಅನಧಿಕೃತವಾಗಿದ್ದು, ಇವುಗಳನ್ನು ತೆರವುಗೊಳಿಸುವುದಾಗಿ ಪಾಲಿಕೆಯು ನೋಟಿಸ್ ಜಾರಿ ಮಾಡಿತ್ತು. ಜತೆಗೆ ತೆರವುಗೊಳಿಸುವ ಸಂಬಂಧ ಪೊಲೀಸ್ ಠಾಣೆಗೆ ರಕ್ಷಣೆ ಕೋರಿದ್ದ ಪತ್ರದ ಸಂಬಂಧ ಪಾಲಿಕೆ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನಧಿಕೃತ ಭಾಗವಿದ್ದಲ್ಲಿ ಸ್ಥಳಪರಿಶೀಲನೆ ಮಾಡಿ ನಂತರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನಿಯಮದಂತೆ ಸ್ಥಳಪರಿಶೀಲನೆ ಮಾಡದೆ ಏಕಾಏಕಿ ಪೊಲೀಸ್ ಠಾಣೆಗೂ ಪತ್ರ ಬರೆದಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದರು.
ಶೃಂಗೇರಿ ಮಠವು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪರಿಗಣಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶಿಸಿದ್ದಾರೆ. ಈ ವಿಷಯವನ್ನು ಪಾಲಕರಿಗೂ ತಿಳಿಸಿದ್ದು, ಅವರಲ್ಲಿ ಮನೆಮಾಡಿದ್ದ ಆತಂಕ ದೂರವಾಗಿದೆ. ಶಾಲೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶಾಲೆಯ ಪ್ರಮುಖರು ತಿಳಿಸಿದ್ದಾರೆ.