

ಮಡಿಕೇರಿ:
ಮಡಿಕೇರಿ ದಸರಾ ಸಂದರ್ಭ ನಿಯಮಗಳನ್ನು ಪಾಲಿಸುವಂತೆ ಎಸ್‌ಪಿ ಕೆ. ರಾಮರಾಜನ್ ಸ್ಪಷ್ಟ ಸೂಚನೆ ನೀಡಿದ್ದಾರೆ. ಮಂಗಳವಾರ ದಸರಾ ಸಮಿತಿ ಪ್ರಮುಖರೊಂದಿಗೆ ನಡೆದ ತುರ್ತು ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ. ಡಿಜೆ ಸಂಗೀತ ನಿಗದಿತ ಡೆಸಿಬಲ್ ಮೀರಬಾರದು. ರಾತ್ರಿ ೧೦ ಗಂಟೆ ಬಳಿಕ ಅಬ್ಬರದ ಸಂಗೀತ ಹಾಕಬಾರದು. ಶಬ್ದ ಮಾಲಿನ್ಯವಾಗದಂತೆ ಎಚ್ಚರ ವಹಿಸಬೇಕು. ಕರ್ಕಶ ಶಬ್ದ ಮಾಡುವ ಪೀಪಿ, ಮುಖವಾಡಕ್ಕೆ ಕಡಿವಾಣ ಹಾಕಲಾಗುವುದು ಎಂದು ಎಸ್‌ಪಿ ತಿಳಿಸಿದರು. ಹೊರ ಜಿಲ್ಲೆಯಿಂದ ಪೊಲೀಸ್, ಹೋಂಗಾರ್ಡ್ ನಿಯೋಜನೆ ಮಾಡಲಾಗುವುದು. ಮಡಿಕೇರಿ ವ್ಯಾಪ್ತಿಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.
ಮಡಿಕೇರಿ ದಸರಾದಲ್ಲಿ ಡಿಜೆ ಅಬ್ಬರ, ಶಬ್ದ ಮಾಲಿನ್ಯದ ಬಗ್ಗೆ ಸೋಮವಾರ ವಕೀಲ ಅಮೃತೇಶ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದ ಬೆನ್ನಲ್ಲೇ ದಸರಾ ಸಮಿತಿ ಪ್ರಮುಖರ ಸಭೆ ಕರೆದಿದ್ದ ಎಸ್‌ಪಿ ಈ ಮಹತ್ವದ ಸೂಚನೆಗಳನ್ನು ಕೊಟ್ಟಿರುವುದು ಗಮನಾರ್ಹವಾಗಿದೆ.