ಖಾಸಗಿ ನೀರಿನ ಘಟಕಕ್ಕೆ ನೋಟಿಸ್ ಜಾರಿ

21 bannur 2
Published on

 ಆಹಾರ ಸುರಕ್ಷತಾ ಅಧಿಕಾರಿಗಳ ತಂಡದಿಂದ ಪರಿಶೀಲನೆ

ಬನ್ನೂರು : ಪಟ್ಟಣದ ಕೆಪಿಟಿಸಿಎಲ್ ರಸ್ತೆಯ ಶುದ್ಧ ಕುಡಿಯುವ ನೀರಿನ ಖಾಸಗಿ ಘಟಕಕ್ಕೆ ನರಸೀಪುರ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿತು. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮಾದರಿಯನ್ನು ಶನಿವಾರ ಪರೀಕ್ಷೆ ನಡೆಸಿದ ತಂಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತು. ಯಾಮೀನ್ ಎಂಟರ್‌ಪ್ರೈಸಸ್‌ನ ಕೆಕೆ ಗೋಲ್ಡ್‌ನ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಬಾಟಲ್‌ಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಘಟಕದಲ್ಲಿರುವ ಲ್ಯಾಬ್ ನಲ್ಲಿ ಸಿಬ್ಬಂದಿ ಇರಲಿಲ್ಲ. ಕಾರ್ಮಿಕರು ಕೈಗವಸು, ಟೋಪಿ, ಮಾಸ್ಕ್ ಇನ್ನಿತರ ಸುರಕ್ಷತಾ ಸಾಧನ ಧರಿಸದೇ ಕೆಲಸ ಮಾಡುತ್ತ ಇದ್ದರು. ನೀರಿನ ಶುದ್ಧತೆ, ಪ್ಯಾಕ್ ಮಾಡುವ ಮುನ್ನ ಗುಣಮಟ್ಟ ದೃಢಪಡಿಸುವ ಸಂಬಂಧ ಸೂಕ್ತ ದಾಖಲೆಯನ್ನು ಸಂಸ್ಥೆಯವರು ಇಟ್ಟಿಲ್ಲ. ಒಂದೇ ಘಟಕ ಹಲವು ಬಾರಿ ವಿವಿಧ ಮಾಲೀಕರಿಗೆ ಪರಭಾರೆ ಆಗಿದೆ. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಯಿತು ಎಂದು ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಜಿ.ಎಸ್.ಸುಮಂತ್ ತಿಳಿಸಿದ್ದಾರೆ.

ಪ್ರಮಾಣ ಪತ್ರ ಪಡೆದುಕೊಂಡಿಲ್ಲ: ಉದ್ದಿಮೆದಾರರು ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದುಕೊಂಡಿಲ್ಲ, ಹಲವು ಬಾರಿ ಅಧಿಕಾರಿಗಳು ಭೇಟಿ ನೀಡಿ ಅಶುದ್ಧತೆ ಬಗ್ಗೆ ತಿಳಿವಳಿಕೆ ನೀಡಿ, 2 ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಉತ್ತರ ನೀಡಿಲ್ಲ.

ಖುದ್ದಾಗಿ ಅಧಿಕಾರಿಗಳೇ ಸ್ಥಳಕ್ಕೆ ಬಂದರೂ ಮಾಲೀಕರು ಬೇಜವಾಬ್ದಾರಿ ತೋರಿಸಿದ್ದಾರೆ. 7 ದಿನದೊಳಗೆ ಇಲಾಖೆ ನೋಟಿಸ್‌ಗೆ ಉತ್ತರ ನೀಡದಿದ್ದರೆ ಕಾನೂನುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net