ಗುತ್ತಿಗೆ ಹಣ ಪಾವತಿಸದ ಕನ್ವೆನ್ಷನ್ ಹಾಲ್‌ಗೆ ನೋಟಿಸ್

Published on

ಮೈಸೂರು: ನಿಯಮಾನುಸಾರ ಅವಧಿಯೊಳಗೆ ಗುತ್ತಿಗೆ ಹಣ ಪಾವತಿಸುವಲ್ಲಿ ವಿಫಲವಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಅನ್ನು ವಶಕ್ಕೆ ಪಡೆಯಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಗುತ್ತಿಗೆದಾರನಿಗೆ ನೋಟಿಸ್ ನೀಡಿದೆ.
ನಗರದ ಹೆಬ್ಬಾಳು ಬಡಾವಣೆಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಅನ್ನು ಕಾರ್ಯಕ್ರಮಗಳಿಗೆ ನೀಡಲು ಹಾಗೂ ನಿರ್ವಹಣೆ ಮಾಡುವ ಗುತ್ತಿಗೆಯನ್ನು ಬೆಂಗಳೂರು ಮೂಲದ ಸರ್ಕಾರ್ ಕನ್ಸ್ಟ್ರಕ್ಷನ್‌ನ ಮಾಲೀಕ ಸಿದ್ದರಾಜಪ್ಪ ಅವರಿಗೆ ನೀಡಲಾಗಿತ್ತು.
ಆದರೆ ನಿಗದಿಪಡಿಸಿದ ಗುತ್ತಿಗೆ ಹಣವನ್ನು ನಿಗದಿತ ಸಮಯದಲ್ಲಿ ಪಾವತಿಸುವಲ್ಲಿ ಸಿದ್ದರಾಜಪ್ಪ ವಿಫಲರಾಗಿದ್ದರು. ಈ ಸಂಬಂಧ ಈ ಹಿಂದೆಯೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಾಕಿ ಹಣ ಪಾವತಿಸುವಂತೆ ನೋಟಿಸ್ ನೀಡಿ ಎಚ್ಚರಿಕೆ ನೀಡಿತ್ತು. ಈ ವೇಳೆ ಬಾಕಿ ಇರುವ ಗುತ್ತಿಗೆ ಹಣ ಪಾವತಿಸಲು ಸಮಯಾವಕಾಶ ಕೋರಿ ಸಿದ್ದರಾಜಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು. ಸದ್ಯ ನ್ಯಾಯಾಲಯದಲ್ಲಿ ಹೂಡಲಾಗಿದ್ದ ರಿಟ್ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ ಪ್ರಾಧಿಕಾರದ ಕಾರ್ಯದರ್ಶಿ ಮಾರ್ಚ್ 20ರಂದು ನೋಟಿಸ್ ಜಾರಿ ಮಾಡಿದ್ದಾರೆ. ಬಾಕಿ ಗುತ್ತಿಗೆ ಹಣವನ್ನು ಸಂಪೂರ್ಣ ಪಾವತಿಸಿ ಕನ್ವೆನ್ಷನ್ ಹಾಲ್ಅನ್ನ ಪ್ರಾಧಿಕಾರದ ವಶಕ್ಕೆ ನೀಡುವಂತೆ ಸೂಚಿಸಿದ್ದಾರೆ. ತಪ್ಪಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net