

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ) ಹಾಗೂ ಬೋರ್‌ವೆಲ್‌ಗಳಲ್ಲಿನ ನೀರಿನ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ತ್ವರಿತವಾಗಿ ಪರಿಶೀಲಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ವೇಳೆ ಅವರು ಈ ಸೂಚನೆ ನೀಡಿದರು. ಮಳೆಗಾಲ ಹಿನ್ನೆಲೆಯಲ್ಲಿ ಕುಡಿಯುವ ನೀರಿನೊಂದಿಗೆ ಇತರ ಜಲಮೂಲ ಅಥವಾ ತ್ಯಾಜ್ಯನೀರು ಸೇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಆರ್‌ಒ ಘಟಕಗಳು ಹಾಗೂ ಬೋರ್‌ವೆಲ್ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ನೀಡಲು ಸೂಚಿಸಿದರು.
ನಗರದಲ್ಲಿ ಸದ್ಯ 198 ಪ್ರವಾಹ ಪೀಡಿತ ಪ್ರದೇಶಗಳಿವೆ. ಇವುಗಳಿಗೆ ಹೊಸದಾಗಿ 11 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿದ್ದು, ಒಟ್ಟು 209 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ 163 ಸ್ಥಳಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಳಿದ 46 ಸ್ಥಳಗಳಲ್ಲಿ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇತರ ಪ್ರದೇಶಗಳ ಮೇಲೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ರಸ್ತೆಗುಂಡಿಗಳನ್ನು ನಿರಂತರವಾಗಿ ಮುಚ್ಚಿರಿ:
ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚವ ಕಾರ್ಯ ನಿರಂತರವಾಗಿ ನಡೆಸಬೇಕು. ಹೊಸದಾಗಿ ಸೃಷ್ಟಿಯಾಗುವ ಗುಂಡಿಗಳನ್ನು ಗುರುತಿಸಿ ಕೂಡಲೇ ಮುಚ್ಚುವ ಕೆಲಸವಾಗಬೇಕು. ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕಾಗಿ ಹೊಸ ತಂತ್ರಾಂಶವನ್ನು ಸಿದ್ದಪಡಿಸಲಾಗುತ್ತಿದ್ದು, ಅದನ್ನು ತ್ವರಿತವಾಗಿ ಅನಾವರಣಗೊಳಿಸಲು ಪ್ರಧಾನ ಅಭಿಯಂತರರಿಗೆ ನಿರ್ದೇಶಿಸಿದರು.
ಪಾದಚಾರಿ ಮಾರ್ಗದಲ್ಲಿ ಪೆಟ್ಟಿಗೆ ಮಳಿಗೆ ತೆರವುಗೊಳಿಸಿ:
ನಗರದಾದ್ಯಂತ ಪಾದಚಾರಿ ಮಾರ್ಗಗಳಲ್ಲಿ ಶ್ವಾಶ್ವತ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. ಇವುಗಳಿಂದ ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಸಂಬಂಧ ಪಾದಚಾರಿ ಮಾರ್ಗಗಳಲ್ಲಿರುವ ಶ್ವಾಶ್ವತ ಪೆಟ್ಟಿಗೆಗಳನ್ನು ಎಲ್ಲ ವಲಯದಲ್ಲೂ ತೆರವುಗೊಳಿಸಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದರು.
ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ಡಾ. ಕೆ.ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ ಕಲ್ಕೆರೆ, ವಲಯ ಆಯುಕ್ತರಾದ ಸ್ನೇಹಲ್, ವಿನೋತ್ ಪ್ರಿಯಾ, ರಮೇಶ್, ರಮ್ಯಾ, ಪ್ರೀತಿ ಗೆಹ್ಲೋಟ್, ಕರೀಗೌಡ, ಪ್ರಧಾನ ಅಭಿಯಂತರರು, ವಲಯ ಮುಖ್ಯ ಅಭಿಯಂತರರು ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಸಮನ್ವಯದಿಂದ ಮರ ತೆರವುಗೊಳಿಸಿ:
ಮಳೆಗಾಲದ ವೇಳೆ ಧರೆಗುರುಳುವ ಮರ, ಟೊಂಗೆಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು. ಅಗ್ನಿಶಾಮಕ ದಳ, ಬೆಸ್ಕಾಂನೊಂದಿಗೆ ಸಮನ್ವಯಯ ಸಾಧಿಸಿಕೊಂಡು ಮರಗಳನ್ನು ತೆರವುಗೊಳಿಸಬೇಕು. ನಾಗರಿಕರಿಗೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಬೇಕಿದ್ದು, ಪಾಲಿಕೆ ಸಹಾಯವಾಣಿ ಸಂಖ್ಯೆ 1533ಗೆ ದೂರು ಬಂದ ಕೂಡಲೇ ಮರ ಕಟಾವು ತಂಡಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವಂತೆ ಮುಖ್ಯ ಆಯುಕ್ತ ಸೂಚಿಸಿದರು.