ಸಮರ್ಪಕ ಕಾಮಗಾರಿ ಕೈಗೊಳ್ಳಲು ಸೂಚನೆ

10 hkr 03
Published on

ಹಿರೇಕೆರೂರ: ಪಟ್ಟಣದ ಪಟ್ಟಣ ಪಂಚಾಯಿತಿಯ ಮೊದಲ ಸಾಮಾನ್ಯ ಸಭೆ ಪಪಂ ಅಧ್ಯಕ್ಷ ಗುರುಶಾಂತ ಎತ್ತಿನಹಳ್ಳಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಅಭಿವೃದ್ಧಿ ಅನುದಾನವನ್ನು ಎಲ್ಲ ವಾರ್ಡ್​ಗಳಿಗೆ ಸಮಾನ ಹಂಚಿಕೆ ಮಾಡಬೇಕು. ವಾರ್ಡ್​ಗಳಲ್ಲಿ ನಡೆಯುವ ಕಾಮಗಾರಿಗಳ ಕುರಿತು ಸದಸ್ಯರ ಗಮನಕ್ಕೆ ತರಬೇಕು ಎಂದು ಕುಸುಮಾ ಬಣಕಾರ ಹಾಗೂ ಕಂಠಾಧರ ಅಂಗಡಿ ತಿಳಿಸಿದರು.

ಪಟ್ಟಣದಲ್ಲಿ ಹಿಂದಿನ ಅನೇಕ ಕಾಮಗಾರಿಗಳು ಕಳಪೆಯಾಗಿವೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ರಮೇಶ ಕೋಡಿಹಳ್ಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಬಡವರೇ ಹೆಚ್ಚಾಗಿರುವ ಜಾವೀದ್ ಖಾನ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲಿ 3 ಕುಡಿಯುವ ನೀರಿನ ತೊಟ್ಟಿ ಅಳವಡಿಸಬೇಕು ಎಂದು ಬಸವರಾಜ ಕಟ್ಟೀಮನಿ ಮನವಿ ಮಾಡಿದರು.

33.12 ಲಕ್ಷ ರೂ. ಮೊತ್ತದ 17 ನೇರ ಟೆಂಡರ್ ಕಾಮಗಾರಿಗಳು, ಇ-ಪ್ರೊಕ್ಯೂಮೆಂಟ್​ನ 1.74 ಕೋಟಿ ರೂ. ಮೊತ್ತದ 14 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಯಿತು. ಹೊಲಿಗೆ ಯಂತ್ರಗಳನ್ನು ಪೂರೈಸಲು ಬಂದ ಕೊಟೇಶನ್ ದರಗಳಿಗೆ ಮಂಜೂರಾತಿ ನೀಡಲಾಯಿತು. 4.03 ಲಕ್ಷ ರೂ. ಮೊತ್ತದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲು ಫಲಾನುಭವಿಗಳ ಆಯ್ಕೆ ನಡೆಯಿತು.

ಉಪಾಧ್ಯಕ್ಷೆ ಸುಧಾ ಮೃತ್ಯುಂಜಯ ಚಿಂದಿ, ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ಸದಸ್ಯರಾದ ದಿಲ್ಲಶಾದ ಬಳಿಗಾರ, ಸನಾವುಲ್ಲಾ ಮಕಾನದಾರ, ಚಂದ್ರಕಲಾ ಕೋರಿಗೌಡ್ರ, ಹರೀಶ ಕಲಾಲ್, ಶಂಶದಾ ಕುಪ್ಪೇಲೂರ, ರಾಜು ಕರಡಿ, ಹನುಮಂತಪ್ಪ ಕುರುಬರ, ಪೂಜಾ ತಂಬಾಕದ, ಅಲ್ತಾಫಖಾನ್ ಪಠಾಣ, ರಜಿಯಾಬೇಗಂ ಅಸದಿ, ಕವಿತಾ ಹಾರ್ನಳ್ಳಿ, ವಿಜಯಶ್ರೀ ಬಂಗೇರ ಹಾಗೂ ಸಿಬ್ಬಂದಿ ಇದ್ದರು.

ಹಂದಿ ಕಚ್ಚಿದ ಬಾಲಕನೊಂದಿಗೆ ಬಂದ ಸ್ಥಳೀಯರು: ಗಿರೀಶ ಪರಶುರಾಮ ಡಾಂಗೆ ಎಂಬ 11 ವರ್ಷದ ಬಾಲಕನಿಗೆ ಗುರುವಾರ ಬೆಳಗ್ಗೆ ಹಂದಿ ಕಚ್ಚಿ ಗಾಯವಾಗಿದೆ. ಹಂದಿಗಳನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಗಾಯಗೊಂಡ ಬಾಲಕನೊಂದಿಗೆ ಪಟ್ಟಣ ಪಂಚಾಯಿತಿ ಸಭೆ ನಡೆಯುತ್ತಿರುವ ಕೊಠಡಿಗೆ ಬಂದು ಆಗ್ರಹಿಸಿದರು. ಹಂದಿ ಹಿಡಿಯಲು ಹೋದರೆ ಅವುಗಳ ಮಾಲೀಕರು ಇಲ್ಲದ ರಾದ್ಧಾಂತ ಮಾಡುತ್ತಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಂದು ಹಿರಿಯ ಸದಸ್ಯ ಮಹೇಂದ್ರ ಬಡಳ್ಳಿ ಸಲಹೆ ಮಾಡಿದರು.

ಕರೊನಾ ಹಾವಳಿಯಿಂದ ಪಟ್ಟಣದ ಆದಾಯ ಸಾಕಷ್ಟು ಕಡಿಮೆಯಾಗಿದೆ. ತೆರಿಗೆ ಸಂಗ್ರಹಕ್ಕೆ ಒತ್ತು ನೀಡಬೇಕಿದೆ. ಹಾಳಾದ ರಸ್ತೆ, ಚರಂಡಿ ದುರಸ್ತಿ ಆಗಬೇಕು. ಎಲ್ಲ ವಾರ್ಡ್​ಗಳಿಗೆ ಸಮಾನ ಪ್ರಾತಿನಿಧ್ಯ ನೀಡುತ್ತೇವೆ. ಎಲ್ಲರೂ ಒಂದಾಗಿ ಪಕ್ಷಭೇದ ಮರೆತು ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ. | ಗುರುಶಾಂತ ಎತ್ತಿನಹಳ್ಳಿ, ಅಧ್ಯಕ್ಷರು, ಪಟ್ಟಣ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net