7ರೊಳಗೆ ಅರ್ಜಿ ವಿಲೇವಾರಿಗೆ ಸೂಚನೆ

4 vikram 8
Published on

ಧಾರವಾಡ: ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಡಿ. 17ರವರೆಗೆ ಸ್ವೀಕೃತಿಯಾಗಿರುವ ಎಲ್ಲ ಅರ್ಜಿಗಳನ್ನು ಜ. 7ರೊಳಗೆ ವಿಲೇಗೊಳಿಸಬೇಕು ಎಂದು ಮತದಾರರ ಯಾದಿ ವಿಶೇಷ ಪರಿಷ್ಕರಣೆ ಕಾರ್ಯದ ವೀಕ್ಷಕಿ, ಹಿರಿಯ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾರರ ಯಾದಿ ಪರಿಷ್ಕರಣೆಯ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಯಾದಿ ಪರಿಷ್ಕರಣೆ ಕೈಗೊಳ್ಳುವಾಗ ಜಿಲ್ಲಾ ಚುನಾವಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಮತಗಟ್ಟೆ ಮಟ್ಟದ ಅಧಿಕಾರಗಳು ಹೀಗೆ ಬಹು ಹಂತಗಳಲ್ಲಿ ಅಚ್ಚುಕಟ್ಟಾಗಿ ಪರಿಶೀಲನೆ ಮಾಡಬೇಕು. ಅನಿವಾಸಿ ಭಾರತೀಯರ ಅರ್ಜಿಗಳಿದ್ದರೆ ಯಾವ ಹಂತದಲ್ಲಿವೆ ಎಂಬುದನ್ನು ಗಮನಿಸಬೇಕು ಎಂದರು.

ಮತಗಟ್ಟೆ ಹಂತದ ಅಧಿಕಾರಿಗಳು ಅರ್ಜಿದಾರರ ಮನೆಗೆ ತೆರಳಿ ಖುದ್ದು ಪರಿಶೀಲಿಸಬೇಕು. ಬಿಎಲ್​ಒಗಳು ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಗೆ ನೋಂದಣಾಧಿಕಾರಿ ಸೇರ್ಪಡೆ ಮಾಡಿ, ಗುರುತಿನ ಚೀಟಿ ವಿತರಿಸಲು ಕ್ರಮಕೈಗೊಳ್ಳಬೇಕು. ಅರ್ಜಿ ಸಲ್ಲಿಸಿದವರಲ್ಲಿ ಅರ್ಹರಾಗಿರುವ 18 ವರ್ಷ ತುಂಬಿದ ಹೊಸ ಮತದಾರರಿಗೆ ಜ. 25ರಂದು ಕಾರ್ಡ್ ವಿತರಿಸಲು ಕ್ರಮ ಜರುಗಿಸಬೇಕು ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿರುವ ಹಾಗೂ ಅತಿಹೆಚ್ಚು ಮತದಾರರ ಹೆಸರು ತೆಗೆದು ಹಾಕಿರುವ ತಲಾ 20 ಮತಗಟ್ಟೆಗಳನ್ನು ಗುರುತಿಸಬೇಕು. ಮತದಾರರ ಹೆಸರು ಬೇರೆ ಕ್ಷೇತ್ರಗಳಲ್ಲಿ ಸೇರ್ಪಡೆಯಾಗಿದ್ದು, ಅವರು ಅಧಿಕೃತ ಅರ್ಜಿ ಸಲ್ಲಿಸಿದ್ದರೆ ಮಾತ್ರ ಪಟ್ಟಿಯಿಂದ ಕೈಬಿಡಬೇಕು. ವಲಸೆ ಕಾರ್ವಿುಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿ, ಜಿಲ್ಲೆಯಲ್ಲಿ ನ. 18ರಿಂದ ಜ. 2ರವರೆಗೆ ಮತದಾರರ ಪಟ್ಟಿ ಸೇರ್ಪಡೆಗೆ 10,449 ಅರ್ಜಿಗಳು, ಪಟ್ಟಿಯಿಂದ ತೆಗೆದುಹಾಕಲು 6,123, ತಿದ್ದುಪಡಿಗೆ 2,421 ಹಾಗೂ 993 ವರ್ಗಾವಣೆ ಅರ್ಜಿಗಳು ಸ್ವೀಕೃತಿಯಾಗಿವೆ. ಇವುಗಳ ಸ್ವೀಕೃತಿ ಮತ್ತು ವಿಲೇವಾರಿಯನ್ನು ಇಆರ್​ಒ ನೆಟ್ ಮೂಲಕ ಕೈಗೊಳ್ಳಲಾಗುತ್ತಿದೆ ಎಂದರು.

ಜಿಪಂ ಸಿಇಒ ಡಾ.ಬಿ. ಸುಶೀಲಾ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ತಹಸೀಲ್ದಾರರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net