ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆ ತಪ್ಪು ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗೆ ನೊಟೀಸ್ ಜಾರಿ

raichur
raichur
Published on

 ರಾಯಚೂರು ರಾಜ್ಯ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸಭೆಗೆ ತಪ್ಪು ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅರತಿಗೆ ಕಾರಣ ಕೇಳಿ ನೊಟೀಸ್ ಜಾರಿಗೆ ಸಮಿತಿಯ ಅಧ್ಯಕ್ಷ ಎನ್.ಎಚ್.ಕೋನರಡ್ಡಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಇನ್ನೀತರ ಇಲಾಖೆಗಳ ಎಲ್ಲಾ ಯೋಜನೆಗಳ ಕಾರ್ಯಕ್ರಮಗಳ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಮಕ್ಕಳ ಕಲ್ಯಾಣ ಸಮಿತಿಯು 84 ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ವಿಲೆಗೊಳಿಸಿ 18 ಪ್ರಕರಣಗಳು ಬಾಕಿ ಇರುತ್ತವೆ ಎಂದು ಸಮಿತಿಗೆ ನೀಡಿದ ಬುಕಲೇಟನಲ್ಲಿ ದಾಖಲಿಸಿದ್ದೀರಿ. ಆದರೆ, ಪಿಪಿಟಿನಲ್ಲಿ ಬೇರೆ ಅಂಕಿ ಅಂಶಗಳನ್ನು ತೋರಿಸುತ್ತೀರಿ ಎಂದು ಅಧ್ಯಕ್ಷರು ಪ್ರಶ್ನಿಸಿದರು.

ಈ ಭಾಗದ ಜನರಿಗೆ ತಿಳಿವಳಿಕೆ ಕಡಿಮೆ ಇದ್ದು, ಜನಜಾಗೃತಿ ಮೂಡಿಸಬೇಕು. ಮಕ್ಕಳನ್ನು ಕೆಲಸಕ್ಕೆ ಕಳುಹಿಸದೇ ಶಾಲೆಗೆ ಸೇರಿಸುವಂತ ಜನಜಾಗೃತಿ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಜಿಲ್ಲಾದ್ಯಂತ ನಿಯಮಿತ ಕ್ಷೇತ್ರ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಾಸಕರು, ಜಿಲ್ಲಾಧಿಕಾರಿಗಳು, ಪಾಲಿಕೆಯ ಆಯುಕ್ತರು ಎಲ್ಲರೂ ಸೇರಿ ಸಭೆ ನಡೆಸಿ, ಪ್ರತಿವರ್ಷ ಇಂತಿಷ್ಟು ಅಂಗನವಾಡಿಗಳಿಗೆ ಕಟ್ಟಡ ಗುರುತಿಸಬೇಕು ಎಂದು ಗುರಿನಿಗದಿಪಡಿಸಿ ಜಾಗ ಗುರುತಿಸಲು ಕ್ರಮವಹಿಸಬೇಕು ಎಂದರು.

ಜನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಸಮಿತಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ವಿಧಾನ ಮಂಡಲದ ಸದಸ್ಯರನ್ನೊಳಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ರಾಜ್ಯದ ವಿವಿಧೆಡೆ ಸಂಚರಿಸಿ ಆಯಾ ಇಲಾಖೆಗಳ ಕಾರ್ಯಕ್ರಮಗಳ, ಯೋಜನೆಗಳ ಬಗ್ಗೆ ಗಂಭೀರ ಪರಿಶೀಲನೆ ನಡೆಸುತ್ತಿದೆ. ಮಹಿಳ್ಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಂದ ಹೆಚ್ಚಿನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆದು ಬಾಲ್ಯವಿವಾಹ, ಪೋಕ್ಸೊ, ಬಾಲಗರ್ಭಿಣಿಯರ ಪ್ರಕರಣಗಳು ಶೂನ್ಯಕ್ಕಿಳಿಯಬೇಕು ಎಂಬುದು ಸಮಿತಿಯ ಆಶಯವಾಗಿದೆ ಎಂದರು.

ಶಾಸಕರಾದ ಶರಣಗೌಡ ಕಂದಕೂರ ಹಾಗೂ ಕರೆಮ್ಮ ಜಿ.ನಾಯಕ ಮಾತನಾಡಿ, ಸಭೆಯಲ್ಲಿ ಚರ್ಚಿಸುವ ಪ್ರತಿಯೊಂದು ವಿಷಯವೂ ಕಡತಕ್ಕೆ ಹೋಗುವ ಮಹತ್ವದ ವಿಧಾನ ಮಂಡಲದ ಸದಸ್ಯರ ಸಮಿತಿ ಸಭೆಗೆ ಹೀಗೆ ತಪ್ಪು ಮಾಹಿತಿ ನೀಡಿದರೆ ಹೇಗೆ? ಅಧಿಕಾರಿಯಾಗಿ ಸರಿಯಾಗಿ ಮಾಹಿತಿ ನೀಡಬೇಕು ಎನ್ನುವ ಜವಾಬ್ದಾರಿ ಬೇಡವಾ? ಎಂದು ಅಧಿಕಾರಿಗೆ ತರಾಟೆ ತೆಗೆದುಕೊಂಡರು. ದೇವದುರ್ಗ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇರದಂತೆ ಕ್ರಮವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಸಮಿತಿಯ ಸದಸ್ಯರಾದ ಹೆಚ್.ಎ. ಇಕ್ಬಾಲ್ ಹುಸೇನ,ಶಾಂತಾರಾಮ್ ಬುಡ್ನಸಿದ್ದಿ, ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ ಮಂಜುಳಾ, ಐಜಿಪಿ ಸತೀಶ ಕುಮಾರ, ಬಳ್ಳಾರಿ ವಲಯದ ಎಡಿಐಜಿ ವರ್ತಿಕಾ ಕಟಿಯಾರ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಓ ಈಶ್ವರ್ ಕಾಂದೂ, ಎಸ್ಪಿ ಪುಟ್ಟಮಾದಯ್ಯ ಎಂ. ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net