ನಿಗದಿತ ಸ್ಥಳದಲ್ಲೇ ವಹಿವಾಟು, ವಾಹನ ನಿಲುಗಡೆಗೆ ಸೂಚನೆ

Notice for trading and parking at designated places
ವಿಜಯಪುರದ ನಗರದ ಬೀದಿ ಬದಿ ವ್ಯಾಪಾರಸ್ಥರೊಂದಿಗೆ ಮಾರಾಟ ವಲಯ (ವೆಂಡಿಂಗ್ ಝೋನ್) ಜಾಗದ ವ್ಯವಸ್ಥೆ ಕುರಿತು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಚರ್ಚೆ ನಡೆಸಿದರು. ಎಎಸ್‌ಪಿ ಶಂಕರ ಮಾರಿಹಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಮಾರಾಟ ವಲಯ (ವೆಂಡಿಂಗ್ ಝೋನ್) ಜಾಗದ ವ್ಯವಸ್ಥೆ ಹಾಗೂ ಆಟೋ- ದ್ವಿಚಕ್ರ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಗ ಗುರುತಿಸಿದ್ದು, ಸೂಚಿಸಿರುವ ಸ್ಥಳದಲ್ಲಿ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಕೈಗೊಳ್ಳದೇ ಇರುವುದು ಮತ್ತು ನಿಗದಿತ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡದೇ ಇರುವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ರಿತ್ಯ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಎಚ್ಚರಿಕೆ ನೀಡಿದರು.

ನಗರದ ಬೀದಿ ಬದಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ವ್ಯಾಪಾರ ಮಾಡುವುದನ್ನು ತಡೆಗಟ್ಟಲು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮಹಾಪೌರರರ ಮಾರ್ಗದರ್ಶನ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಲ್ಲಿ ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬುಧವಾರ ನಗರದ ನೆಹರು ಮಾರ್ಕೆಟ್ ಹಿಂಭಾಗ, ಎಂ.ಆರ್. ಹೋಟೆಲ್ ಬಳಿ, ಕೆಎಸ್‌ಆರ್‌ಟಿಸಿ ಡಿಪೋ ಪಕ್ಕ, ಅಂಬೇಡ್ಕರ್ ಕ್ರೀಡಾಂಗಣ ಎದುರುಗಡೆ, ಸೈನಿಕಶಾಲೆ ಜಿಮ್‌ಖಾನಾ ಕ್ಲಬ್ ಹಿಂದೆ ಹಾಗೂ ಆಹಾರ ಮಾರಾಟಕ್ಕೆ ಇಂಡಿ ರೋಡ್ ಕ್ರೀಡಾಂಗಣದ ಬಳಿ ಜಾಗಗಳನ್ನು ಗುರುತಿಸಿ, ಸದರಿ ಸ್ಥಳಕ್ಕೆ ಬೀದಿ ಬದಿ ವ್ಯಾಪಾರಸ್ಥರರೊಂದಿಗೆ ಆಯುಕ್ತರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದ್ದಲ್ಲದೇ, ಮುಂದಿನ ದಿನಗಳಲ್ಲಿ ಸದರಿ ಜಾಗಗಳಲ್ಲಿಯೇ ವ್ಯಾಪಾರ ಕೈಗೊಳ್ಳುವುದಾಗಿ ತಿಳಿಸಿದರು.

ಜನದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು, ಆಟೋ ಮತ್ತು ಇತರೆ ದ್ವಿಚಕ್ರ ವಾಹನಗಳ ಮಾಲೀಕರೊಂದಿಗೆ ಸಭೆ ನಡೆಸಿ, ನಿಗದಿ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬೇಕು. ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಬಾರದು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಿದರು. ಅಲ್ಲದೆ, ವೆಂಡಿಂಗ್ ಝೋನ್‌ಗಳಲ್ಲಿ ಮಾತ್ರ ವ್ಯಾಪಾರ ವಹಿವಾಟು ಕೈಗೊಳ್ಳಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net