ಪ್ರವಾಸಿಗರ ಭದ್ರತೆ, ಸುರಕ್ಷತೆಗೆ ಸೂಚನೆ

POLICE KMT
Published on

ಕುಮಟಾ: ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯ ಹೋಂಸ್ಟೇ, ರೆಸಾರ್ಟ್ ಮಾಲೀಕರೊಂದಿಗೆ ಬುಧವಾರ ಸಭೆ ನಡೆಸಿದ ಸಿಪಿಐ ಯೋಗೇಶ ಕೆ. ಎಂ. ಅವರು ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆ ಕ್ರಮಗಳ ಕುರಿತು ತಿಳಿವಳಿಕೆ ಹಾಗೂ ಅಗತ್ಯ ಸೂಚನೆ ನೀಡಿದರು.

ಪ್ರಮುಖ ಪ್ರವಾಸಿ ತಾಣಗಳಲ್ಲಿನ ಹೋಂಸ್ಟೇಗಳು ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅನುಮತಿ ಪಡೆಯಲೇಬೇಕು. ಪೊಲೀಸರಿಂದ ಅಥವಾ ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶ, ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ವಿುಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಹೋಂಸ್ಟೇ, ರೆಸಾರ್ಟ್ ಮಾಲೀಕರೇ ಜವಾಬ್ದಾರರಾಗಲಿದ್ದು ಕಾನೂನಿನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ ಎಂದು ಸಿಪಿಐ ಯೋಗೇಶ ತಿಳಿಸಿದರು.

ಮುಖ್ಯವಾಗಿ ಹೋಂಸ್ಟೇ, ರೆಸಾರ್ಟ್​ಗಳಿಗೆ ಬರುವ ಪ್ರವಾಸಿಗರ ವಿವರ ದಾಖಲಿಸಿಕೊಳ್ಳಬೇಕು. ವಿದೇಶಿ ಪ್ರವಾಸಿಗರ ಪಾಸ್ ಪೋರ್ಟ್, ವೀಸಾ, ವಿದೇಶಿ ಸಿ- ಫಾರಂನ್ನು ಠಾಣೆಗೆ ನೀಡಬೇಕು. ವಿದೇಶಿ ಪ್ರವಾಸಿಗರು ಹೋಂಸ್ಟೇ, ರೆಸಾರ್ಟ್​ನಿಂದ ಚೆಕ್​ಔಟ್ ಆಗಿ ಹೋಗುವಾಗ ಅವರ ಮುಂದಿನ ಗಮ್ಯವನ್ನು ಸಿ-ಫಾರಂ ಪೋರ್ಟಲ್​ನಲ್ಲಿ ಮಾಹಿತಿ ತುಂಬಿಸಿ ಅದರ ದಾಖಲೆಯನ್ನು ಪೊಲೀಸ್ ಠಾಣೆಗೆ ನೀಡಬೇಕು. ವಿದೇಶಿ ಪ್ರವಾಸಿಗರೊಂದಿಗೆ ಸೌಜನ್ಯದ ವರ್ತನೆ, ರಾತ್ರಿಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳುವುದು, ಮುಂಜಾಗ್ರತೆಯಾಗಿ ನುರಿತ ಈಜುಗಾರ(ಲೈಫ್​ಗಾರ್ಡ) ಸಿಬ್ಬಂದಿ ನೇಮಕ, ಲೈಫ್​ಜಾಕೆಟ್ ಬಳಕೆ, ಸೂಚನಾ ಫಲಕಗಳ ಅಳವಡಿಕೆ, ಸಿಸಿ ಕೆಮರಾ ಅಳವಡಿಕೆ ಮುಂತಾದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net