ಬಳ್ಳಾರಿ : ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿನ ಅವ್ಯವಸ್ಥೆ ಕಂಡು ನಿಲಯ ಪಾಲಕರ ಅಮಾನತಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಆದೇಶಿಸಿದರು.
ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ-02 ಗೆ ಶನಿವಾರ ಭೇಟಿ ನೀಡಿ ಅಡುಗೆ, ಆಹಾರ ದಾಸ್ತಾನು ಹಾಗೂ ವಿದ್ಯಾರ್ಥಿಗಳ ಕೋಣೆ ಪರಿಶೀಲಿಸಿ ಮಾತನಾಡಿದರು. ರಾಜ್ಯ ಸರ್ಕಾರವು ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿಯೇ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಮಕ್ಕಳಿಗೆ ಊಟ, ವಸತಿ, ರಕ್ಷಣೆ ಸೇರಿದಂತೆ ಮೂಲಭೂತ ಸೌಕರ್ಯಗಳು ಒದಗಿಸಲು ಏನು ಸಮಸ್ಯೆಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿ ನಿಲಯಪಾಲಕರ ಅಮಾನತ್ತಿಗೆ ಸೂಚಿಸಿದರು. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡಬೇಕು. ಕಾಲಕಾಲಕ್ಕೆ ವಸತಿ ನಿಲಯಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು ಎಂದರು.
ಬಳಿಕ, ಸರ್ಕಾರಿ ಮೆಟ್ರಿಕ್‌ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ಸಂವಾದ ನಡೆಸಿ, ಗುಣಮಟ್ಟದ ಹಾಲು ವಿತರಣೆ ಮಾಡುತ್ತಾರೆಯೇ, ಊಟ ಚೆನ್ನಾಗಿರುತ್ತದೆಯೇ, ಸ್ನಾನ ಹಾಗೂ ಶೌಚಾಲಯದ ಕೊಠಡಿಗಳು ಸ್ವಚ್ಛವಾಗಿವೆಯೇ, ಬಿಸಿ ನೀರು ಬರುತ್ತಿದೆಯೇ, ರಾತ್ರಿ ವೇಳೆ ಸೊಳ್ಳೆಗಳ ಕಾಟವಿದೆಯೇ ಎಂದೆಲ್ಲ ವಿಚಾರಿಸಿ ಮಾಹಿತಿ ಪಡೆದುಕೊಂಡರು.
ವಸತಿ ನಿಲಯಗಳಲ್ಲಿ ದೇಶದ ಮಹಾನುಭಾವರ ಕೈನಿಂದ ಬಿಡಿಸಿದ ಚಿತ್ರಗಳನ್ನು ವಿರೂಪಗೊಳಿಸುವಂತಿಲ್ಲ. ಅವರಿಗೆ, ಅವಮಾನ ಮಾಡಿದಂತಾಗುತ್ತದೆ ಎಂದು ಕಿವಿ ಮಾತು ಹೇಳಿದರು