ಸಿಮ್ಸ್‌ನಲ್ಲಿ ಖಾಲಿ ಹುದ್ದೆ ಭರ್ತಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ

sims meeting
ಸಿಮ್ಸ್‌ನಲ್ಲಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬೇಳೂರು ಗೋಪಾಲಕೃಷ್ಣ, ಸುಜಾತಾ ರಾಥೋಡ್, ಡಾ. ಆರ್.ಸೆಲ್ವಮಣಿ, ಸ್ನೇಹಲ್ ಲೋಖಂಡೆ, ಜಿ.ಕೆ.ಮಿಥುನ್‌ಕುಮಾರ್, ಡಾ. ವಿರೂಪಾಕ್ಷಪ್ಪ ಇದ್ದರು.
Published on

ಶಿವಮೊಗ್ಗ: ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ)ಗೆ ಅಗತ್ಯವಾದ ಮೂಲ ಸೌಕರ್ಯ, ಖಾಲಿ ಹುದ್ದೆಗಳ ಭರ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ನಿರ್ದೇಶಕರಿಗೆ ಸೂಚಿಸಿದರು.

ಸಿಮ್ಸ್‌ನಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರೇಡಿಯೋಲಜಿಸ್ಟ್ ಹುದ್ದೆ ಭರ್ತಿ ಮಾಡಬೇಕು. ಪಿಜಿ ನರ್ಸಿಂಗ್ ಹಾಸ್ಟೆಲ್ ಕಟ್ಟಡಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಆಂಕೋಸರ್ಜನ್, ನ್ಯೂರೋಸರ್ಜನ್, ನ್ಯೂರಾಲಜಿಸ್ಟ್‌ಗಳಿದ್ದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೇಮಕ ಮಾಡಿಕೊಂಡು ಸೇವೆ ಒದಗಿಸುವಂತೆ ಹೇಳಿದರು.
ಮೆಗ್ಗಾನ್ ಆಸ್ಪತ್ರೆಯ ಖಾಲಿ ಹುದ್ದೆ ಭರ್ತಿ ಸಂಬಂಧ ಕಡತ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸಂಸ್ಥೆಯಲ್ಲಿ ಡಿ ಗ್ರೂಪ್ ಮತ್ತು ಸ್ಕ್ಯಾವೆಂಜರ್ ನಡುವಿನ ವೇತನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಸೂಚನೆ ನೀಡಿದ ಅವರು, ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕು. ಅವರಿಗೆ ನಿಗದಿಯಾದ ವೇತನ ಭತ್ಯೆಗಳನ್ನು ಸರಿಯಾಗಿ ಪಾವತಿಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಯೂಸರ್ ಚಾರ್ಜಸ್, ಎಬಿಎಆರ್‌ಕೆ ಮೊತ್ತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗುರಿ ನಿಗದಿಪಡಿಸಿಕೊಂಡು ಗುರಿ ಸಾಧಸಬೇಕು. ಡಿಎಂಇ ಅವರು ನಿಯಮಿತವಾಗಿ ಖರ್ಚು ವೆಚ್ಚದ ಕುರಿತು ಪರಿಶೀಲಿಸಬೇಕು. ಓಬಿಜಿ, ಮಕ್ಕಳ ವಿಭಾಗ, ಔಷಧಿ ಖರೀದಿ ಸೇರಿ ಸಂಸ್ಥೆಯಲ್ಲಿ ನಡೆಯುತ್ತಿರುವ ವಿವಿಧ ಕಟ್ಟಡ ಮತ್ತಿತರೆ ಕಾಮಗಾರಿಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಇಡೀ ಆಸ್ಪತ್ರೆಯ ಲೆಕ್ಕಪತ್ರವನ್ನು ಉತ್ತಮವಾಗಿ ನಿರ್ವಹಿಸಬೇಕು. ಜತೆಗೆ ವಾರ್ಷಿಕ ಆದಾಯದ ಕುರಿತು ಗುರಿ ನಿಗದಿಪಡಿಸಿ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಿಮ್ಸ್ ಮುಖ್ಯ ಆಡಳಿತಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಆಸ್ಪತ್ರೆಯಲ್ಲಿ 791, ಓಬಿಜಿ 304, ಪಿಡೀಯಾಟ್ರಿಕ್ 120 ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 299 ಹಾಸಿಗೆ ಸೇರಿ ಒಟ್ಟು 1,514 ಹಾಸಿಗೆ ಸಾಮರ್ಥ್ಯವನ್ನು ಆಸ್ಪತ್ರೆ ಹೊಂದಿದೆ. ಇದರಲ್ಲಿ 1302 ಆಕ್ಸಿಜನ್ ಬೆಡ್, 128 ಐಸಿಯು ಇದೆ. 333 ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದು ಇನ್ನೂ 100 ಶುಶ್ರೂಷಕರ ಅವಶ್ಯಕತೆ ಇದೆ. ಗ್ರೂಪ್ ಸಿ ಮತ್ತು ಡಿ ನೌಕರರ ವಸತಿ ನಿಲಯಗಳ ಕೊರತೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net