

ಮುಂಡಗೋಡ: ತಾಲೂಕಿನಲ್ಲಿ ಹಿಂಗಾರು ಮಳೆಯಿಂದಾಗಿ ಗೋವಿನಜೋಳ ಹಾಗೂ ಭತ್ತದ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಹೀಗಾಗಿ ತಹಸೀಲ್ದಾರ್ ಮತ್ತು ಕೃಷಿ ಅಧಿಕಾರಿಗಳಿಗೆ ಎರಡನೇ ಹಂತದ ಸರ್ವೇ ನಡೆಸಲು ಸೂಚನೆ ನೀಡಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಮೊದಲನೇ ಸರ್ವೇ ಮುಗಿದಿತ್ತು. ಆದರೆ, ನಂತರ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಮತ್ತೆ ಹೆಚ್ಚು ಬೆಳೆ ಹಾನಿಯಾಗಿದೆ. ಒಂದು ವಾರದಲ್ಲಿ ಎರಡನೇ ಸರ್ವೇ ಮುಗಿದ ನಂತರ ಸಂಪೂರ್ಣ ಬೆಳೆಯ ಹಾನಿಯ ಚಿತ್ರಣ ಸಿಗಲಿದೆ.
ಅಡಕೆ ಬೆಳೆಗೆ ಕೊಳೆರೋಗ, ಎಲೆಚುಕ್ಕೆ ರೋಗವು ತಾಲೂಕಿನಲ್ಲಿ ಕಂಡುಬಂದಿಲ್ಲ. ಆದರೆ, ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಬೆಳೆ ವಿಮೆಯ ಪ್ರಕಾರ ಅಡಕೆ ಬೆಳೆ ಕೊಳೆರೋಗ ಕಾಣಿಸಿಕೊಂಡಾಗ ವಿಮೆಯ ನೀತಿಯಲ್ಲಿ ಇಲ್ಲ. ಇದು ಹವಾಮಾನಾಧಾರಿತ ವಿಮೆ. ಬೆಳೆ ಆಧಾರಿತ ವಿಮೆ ಅಲ್ಲ. ಭತ್ತ, ಗೋವಿನಜೋಳ, ಕಬ್ಬು ಬೆಳೆ ಆಧಾರಿತ ವಿಮೆಗಳು. ಹತ್ತು ಹದಿನೈದು ದಿನಗಳಲ್ಲಿ ಈ ವರ್ಷದ ಬೆಳೆ ವಿಮೆ ನಿಕ್ಕಿಯಾಗುತ್ತದೆ ಎಂದರು.