

ಕಡೂರು: ತಾಲೂಕಿನ ಅಂಚೆಚೋಮನಹಳ್ಳಿ ಸಮೀಪದ ಕುಪ್ಪಾಳು ಮುರಾರ್ಜಿ ವಸತಿ ಶಾಲೆ ಆವರಣದಲ್ಲಿರುವ ವಿದ್ಯುತ್ ತಂತಿಗಳನ್ನು ಹೊರಭಾಗಕ್ಕೆ ಸ್ಥಳಾಂತರಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೂಚನೆ ನೀಡಿದರು.
ಶನಿವಾರ ವಿದ್ಯಾರ್ಥಿಯೊಬ್ಬ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ ಮಾತನಾಡಿ,
ಶಾಲೆ ಸಿಬ್ಬಂದಿ ನಿರ್ಲಕ್ಷೃದಿಂದ ಅಮೂಲ್ಯ ಜೀವ ಹೋಗಿದೆ. ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಸೌಲಭ್ಯ ಕಲ್ಪಿಸಲು ತೊಂದರೆಯಾಗುತ್ತಿದೆ. ಯಗಟಿ ಶಾಲೆ ವಿದ್ಯಾರ್ಥಿಗಳೂ ಇಲ್ಲಿಯೇ ಇರುವುದರಿಂದ ಒತ್ತಡ ಹೆಚ್ಚಾಗಿದೆ. ಈ ಕಾರಣದಿಂದ ಯಗಟಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಅಗತ್ಯವಿದೆ. ಕಡೂರಿನಲ್ಲಿ ಬಾಡಿಗೆಗೆ ಕಟ್ಟಡ ದೊರೆಯುವುದು ಕಷ್ಟಕರವಾದ್ದರಿಂದ ಸೂಕ್ತ ಸ್ಥಳಕ್ಕೆ ಯಗಟಿ ವಸತಿ ಶಾಲೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದೇನೆ. ಈ ಕುರಿತು ಶಿಕ್ಷಣ ಸಚಿವರ ಬಳಿಯೂ ಚರ್ಚಿಸುತ್ತೇನೆ ಎಂದು ಮಾಹಿತಿ ನೀಡಿದರು.
ಯಗಟಿ ವಸತಿ ಶಾಲೆ ಪ್ರಾಚಾರ್ಯ ಗಿರೀಶ್, ಮುಖಂಡ ವಸಂತಕುಮಾರ್, ಶ್ರೀನಿವಾಸ್, ರಾಜಪ್ಪ, ಮಲ್ಲಿಕಾರ್ಜುನ್, ವಸತಿ ಶಾಲೆ ಸಿಬ್ಬಂದಿ ಇದ್ದರು.