ಮಕ್ಕಳಿಗೆ ಮೊಟ್ಟೆ ನೀಡದ್ದಕ್ಕೆ ನೋಟಿಸ್

IMG-20250821-WA0031
ಹುಣಸೂರು ನಗರದ ತಾ.ಪಂ.ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸಿದ್ದಗಂಗಮ್ಮ ಅಧಿಕಾರಿಗಳಿಂದ ಮಾಹಿತಿ ಪಡದರು. ಇಒ ಕೆ.ಹೊಂಗಯ್ಯ, ಎಒ ಹರಿಣಿ ಇದ್ದಾರೆ.
Published on

ಹುಣಸೂರು : ತಾಲೂಕಿನ ಹನಗೋಡು ಹೋಬಳಿ ಕೇಂದ್ರದ ಬಾಲಕರ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಿಂಗಳಿನಿಂದ ಬಿಸಿಯೂಟದಲ್ಲಿ ಮೊಟ್ಟೆ ನೀಡಿಲ್ಲವೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಉಪಪ್ರಾಂಶುಪಾಲರಿಗೆ ಕಾರಣಕೇಳಿ ನೋಟಿಸ್ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾ.ಪಂ.ಆಡಳಿತಾಧಿಕಾರಿ ಸಿದ್ದಗಂಗಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಶಾಲೆಯಲ್ಲಿ ಎರಡು ತಿಂಗಳ ಹಿಂದೆ ಸತತ ಒಂದು ತಿಂಗಳ ಕಾಲ ಮಕ್ಕಳಿಗೆ ಮೊಟ್ಟೆ ನೀಡಿಲ್ಲ ಎಂದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ದೂರು ನೀಡಿದ್ದರು. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು. ಈಗಾಗಲೇ ಶಾಲೆಯ ಉಪಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಡಿಡಿಪಿಐ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಆಯುಕ್ತರಿಗೆ ಲಿಖಿತ ಮಾಹಿತಿ ನೀಡಲಾಗಿದೆ. ಬಿಸಿಯೂಟದಲ್ಲಿ ಪಾಲಕರಿಂದ ಒಪ್ಪಿಗೆ ಪತ್ರ ಪಡೆದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮೊಟ್ಟೆ ನೀಡಲು ಸರ್ಕಾರ ಸೂಚಿಸಿದ್ದು, ಸರ್ಕಾರದ ಆದೇಶದ ಉಲ್ಲಂಘನೆ ಸಹಿಸುವುದಿಲ್ಲವೆಂದು ತಿಳಿಸಿದರು.

ಈ ವೇಳೆ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಮಧ್ಯೆ ಪ್ರವೇಶಿಸಿ ಒಂದು ತಿಂಗಳ ಕಾಲ ಮೊಟ್ಟೆ ಕೊಡಲಿಲ್ಲವೆಂದರೂ ಅಕ್ಷರದಾಸೋಹದ ತಾಲೂಕು ಸಹಾಯಕ ನಿರ್ದೇಶಕರಿಗೆ ಮಾಹಿತಿ ಬರಲಿಲ್ಲವೇಕೆ ಎಂದು ಎಡಿ ರಾಜೇಂದ್ರರನ್ನು ಪ್ರಶ್ನಿಸಿದಾಗ ಅಧಿಕಾರಿ ಮೌನಕ್ಕೆ ಶರಣಾದರು.

ಅಯ್ಯನಕೆರೆಹಾಡಿಯಲ್ಲಿ ಪಿಎಂ ಜನಮನ ಯೋಜನೆ: ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನ ಹಾಡಿಯಾದ ಅಯ್ಯನಕೆರೆಹಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪೂರ್ಣ ಗಿರಿಜನ ಮಕ್ಕಳು(ಒಟ್ಟು 28 ವಿದ್ಯಾರ್ಥಿಗಳಿದ್ದಾರೆ)ವ್ಯಾಸಂಗ ಮಾಡುತ್ತಿದ್ದು, ಈ ಶಾಲೆ ಪಿಎಂ ಜನಮನ ಯೋಜನೆಗೆ ಆಯ್ಕೆಯಾಗಿದೆ. ಆದಿವಾಸಿ ಜೇನುಕುರುಬ ಸಮುದಾಯದ ಮಕ್ಕಳಿಗಾಗಿಯೇ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಅದರಂತೆ 2.6 ಕೋಟಿ ರೂ.ಗಳ ವೆಚ್ಚದಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ವಸತಿನಿಲಯವನ್ನೂ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ಗ್ರಾಮದ ಇತರ ಸಮುದಾಯದ ವಿದ್ಯಾರ್ಥಿಗಳೂ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದರು.

9 ಕಡೆಗಳಲ್ಲಿ ಬಹುಪಯೋಗಿ ಭವನಗಳ ನಿರ್ಮಾಣ: ಪರಿಶಿಷ್ಟ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್ ಮಾತನಾಡಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಾಲೂಕಿನ 9 ಕಡೆಗಳಲ್ಲಿ ಬಹುಪಯೋಗಿ ಭವನವನ್ನು ನಿರ್ಮಿಸಲಾಗುತ್ತಿದೆ. ತಲಾ 60 ಲಕ್ಷ ರೂ.ಗಳ ವೆಚ್ಚದಲ್ಲಿ ಭವನಗಳನ್ನು ನಿರ್ಮಿಸಲಾಗುತ್ತಿದ್ದು, ನಾಲ್ಕು ಕೊಠಡಿಗಳು, ನಾಲ್ಕು ಶೌಚಗೃಹಗಳನ್ನು ಹೊಂದಿರುತ್ತದೆ. ಭವನದ ಕೊಠಡಿಗಳನ್ನು ಶಾಲೆ ಕೊಠಡಿಗಳಾಗಿ, ಅಂಗನವಾಡಿ ಕೇಂದ್ರಗಳಾಗಿ, ಆರೋಗ್ಯ ಕೇಂದ್ರ, ಗ್ರಂಥಾಲಯ, ಕಂದಾಯ ಇಲಾಖೆ, ಸಭಾಂಗಣ ಹೀಗೆ ಸ್ಥಳೀಯ ಅಗತ್ಯತೆ ಇರುವಂತೆ ಇಲಾಖೆಗಳು ಬಳಸಿಕೊಳ್ಳಬಹುದಾಗಿದೆ. ತಾಲೂಕಿನ ಬಲ್ಲೇನಹಳ್ಳಿ, ತರೀಕಲ್ ರಂಗಯ್ಯನಕೊಪ್ಪಲು, ಕೊಟ್ಟಿಗೆ ಕಾವಲ್, ತೆಕ್ಕಲಹಾಡಿ, ವೀರನಹೊಸಹಳ್ಳಿ, ನಾಗಾಪುರ ಪುನರ್ವಸತಿ ಕೇಂದ್ರ ಬ್ಲಾಕ್ 5 ಮತ್ತು 1, ಪೆಂಜಳ್ಳಿ ಹಾಡಿ ಮತ್ತು ಕೊಳವಿಗೆ ಹಾಡಿಗಳಲ್ಲಿ ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅನಂತಶಯನ ಮಾತನಾಡಿ, ನಗರದ ಆಯುರ್ವೇದ ಆಸ್ಪತ್ರೆಯಲ್ಲಿ ಯೋಗಾ ಭವನ ಹಾಗೂ ಸ್ಟೇರ್ ಕೇಸ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಯೋಗಭವನ ನಿರ್ಮಾಣಕ್ಕೆ ಜಿ.ಪಂ.ಯಿಂದ 10 ಲಕ್ಷ ರೂ.ಗಳು ಹಾಗೂ ಸ್ಟೇರ್‌ಕೇಸ್ ನಿರ್ಮಾಣಕ್ಕೆ ತಾ.ಪಂ.ಯಿಂದ 4 ಲಕ್ಷ ರೂ.ಬಿಡುಗಡೆಯಾಗಿದೆ. ತಾಲೂಕಿನ ಆಯರಹಳ್ಳಿ ಮತ್ತು ಹರವೆ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳು ಆಯುಷ್ ಆರೋಗ್ಯ ಮಂದಿರಗಳಾಗಿ ಉನ್ನತೀಕರಣಗೊಂಡಿದ್ದು, ಸಾರ್ವಜನಿಕರಿಗೆ ಯೋಗ ತರಬೇತಿ ನೀಡಲಾಗುತ್ತಿದೆ. ಆಯರಹಳ್ಳಿಯಲ್ಲಿ ಮೇ ತಿಂಗಳಿನಿಂದ ಜುಲೈವರಗೆ ಒಟ್ಟು 574 ಮಂದಿ ಮತ್ತು ಹರವೆ ಆಸ್ಪತ್ರೆಯಲ್ಲಿ 580ಜನ ಯೋಗ ತರಬೇತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಹಾಯಕ ಲೆಕ್ಕಾಧಿಕಾರಿ ಹರಿಣಿ, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.

ಹಳ್ಳ ಹಿಡಿದ ಯೋಜನೆ

ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಮಾತನಾಡಿ, ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ನೀಡುತ್ತಿದ್ದ ಸಸಿಗಳ ವಿತರಣಾ ಸಂಖ್ಯೆಗಳು ಅನುದಾನದ ಕೊರತೆಯಿಂದಾಗಿ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಈ ಬಾರಿ ಸಾಮಾಜಿಕ ವಿಭಾಗದ ವತಿಯಿಂದ ಕೇವಲ 2500 ಸಸಿಗಳನ್ನು ವಿತರಿಸಲು ಸರ್ಕಾರ ಅನುದಾನ ನೀಡಿದೆ ಎಂದು ತಿಳಿಸಿದಾಗ, ತಾಲೂಕಿನಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅತ್ಯಂತ ಯಶಸ್ವಿಯಾಗಿ ರಾಜ್ಯದಲ್ಲೇ ಪ್ರಥಮಸ್ಥಾನ(ವಾರ್ಷಿಕ 7 ಲಕ್ಷ ಸಸಿಗಳ ವಿತರಣೆ) ಗಳಿಸಿತ್ತು. ಅನುದಾನದ ಕೊರತೆಯಿಂದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲವೆಂದು ಇಒ ಬೇಸರಿಸಿದರು.

ಬಾಲ್ಯ ವಿವಾಹ ಪ್ರಕರಣಗಳು

ಶಿಶು ಅಬಿವೃದ್ಧಿ ಯೋಜನಾದಿಕಾರಿ ಹರೀಶ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಏಪ್ರಿಲ್ ತಿಂಗಳಿನಿಂದ ಜುಲೈವರೆಗೆ 13 ಕಡೆಗಳಲ್ಲಿ ಬಾಲ್ಯವಿವಾಹ ಪ್ರಕರಣಗಳನ್ನು ಗುರುತಿಸಿ ವಿವಾಹವಾಗದಂತೆ ತಡೆಹಿಡಿಯಲಾಗಿದೆ. ಈ ಪೈಕಿ 10 ಪ್ರಕರಣಗಳು ಒಂದು ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ ಮುಂದೆ 10 ಪ್ರಕರಣಗಳು ಬಂದಿವೆ. ಬಾಲಮಂದಿರದಲ್ಲಿ ಇಬ್ಬರು ದಾಖಲಾಗಿದ್ದಾರೆಂದು ತಿಳಿಸಿದರು.

ತಾಲೂಕಿನಲ್ಲಿ ಒಟ್ಟು 380 ಅಂಗನವಾಡಿ ಕೇಂದ್ರಗಳಿದ್ದು, 281 ಕೇಂದ್ರಗಳಿಗೆ ಸ್ವಂತ ಕಟ್ಟಡವಿದೆ. ತಾಲೂಕಿನ ಹಗರನಹಳ್ಳಿ, ಮೂಕನಹಳ್ಳಿ, ಗೌರಿಪುರ ಮತ್ತು ಹೊನ್ನಿಕುಪ್ಪೆ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ನಿವೇಶನ ಸಿಗುತ್ತಿಲ್ಲ. ನಗರವ್ಯಾಪ್ತಿಯಲ್ಲೂ 8 ಕಡೆ ನಿವೇಶನದ ಕೊರತೆ ಕಾಡುತ್ತಿದೆ. ಕಳೆದ ಮೇ ತಿಂಗಳವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ವಿತರಣೆಯಾಗಿದ್ದು, ಜೂನ್ ಮತ್ತುಜುಲೈ ತಿಂಗಳ ಬಾಕಿ ಇದೆ ಎಂದರು.

----------

ಪಿಎಂ ಸೂರ್ಯಘರ್ ಯೋಜನೆಗೆ ಬಿಳಿಕೆರೆ ಆಯ್ಕೆ

ಕೇಂದ್ರ ಸರ್ಕಾರದ ಪಿಎಂ ಸೂರ್ಯಘರ್(ಸೌರಗ್ರಾಮ) ಯೋಜನೆಗೆ ತಾಲೂಕಿನ ಬಿಳಿಕೆರೆ ಗ್ರಾಮ ಆಯ್ಕೆಯಾಗಿದೆ ಎಂದು ಬಿಳಿಕೆರೆ ಎಇಇ ಸಿ.ಅನಿಲ್ ತಿಳಿಸಿದರು.

ಯೋಜನೆಯಡಿ ಗ್ರಾಮದಲ್ಲಿ ಪ್ರತಿಯೊಂದು ಮನೆಯವರೂ ತಮ್ಮ ಮನೆಯ ಛಾವಣಿಯಲ್ಲಿ ಗ್ರಾ.ಪಂ. ಮತ್ತು ನಿಗಮದ ಅಧಿಕೃತ ಮಾರಾಟಗಾರರ ಸಮನ್ವಯದೊಂದಿಗೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸುವ ಮೂಲಕ ಮೌಲ್ಯಯುತ ಕೊಡುಗೆ ನೀಡಿದಂತಾಗಲಿದೆ. 6 ತಿಂಗಳ ಕಾಲಾವಕಾಶವಿದ್ದು ಸಂಪೂರ್ಣ ಸೋಲಾರ್ ಶಕ್ತಿ ಬಳಕೆ ಗ್ರಾಮವಾದರೆ ಕೇಂದ್ರ ಸರ್ಕಾರ ಒಂದು ಕೋಟಿ ರೂ. ಪ್ರೋತ್ಸಾಹಧನ ಗ್ರಾ.ಪಂ.ಗೆ ನೀಡಲಿದೆ.

-----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net