ವಿದ್ಯಾಗಮ ಅನುಷ್ಠಾನಕ್ಕೆ ಸೂಚನೆ

suresh kumar 1
Published on

ಬೆಂಗಳೂರು: ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ನಿರಂತರವಾಗಿಟ್ಟುಕೊಳ್ಳಬೇಕೆಂದು ರೂಪಿಸಿರುವ ‘ವಿದ್ಯಾಗಮ’ ಯೋಜನೆಯು ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುತ್ತಿದ್ದು, ಆ ಮೂಲಕ ನಮ್ಮ ಸಂಸ್ಕೃತಿಯ ಪುನರುತ್ಥಾನವಾದಂತಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ವಿದ್ಯಾಗಮ ಯೋಜನೆ ಅನುಷ್ಠಾನ ಕುರಿತಂತೆ ರಾಜ್ಯದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ವೆಬಿನಾರ್ ಮೂಲಕ ಸಂವಾದ ನಡೆಸಿದರು. ಬಳಿಕ ಯೋಜನೆ ಕುರಿತು ರಾಜ್ಯದ ಎಲ್ಲ ಡಿಡಿಪಿಐ, ಡಯಟ್ ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಯೋಜನೆ ಮೂಲಕ ಶಿಕ್ಷಣವು ನಮ್ಮ ಕಟ್ಟಕಡೆಯ ಹಳ್ಳಿ ಮಕ್ಕಳಿಗೂ ತಲುಪುವಂತೆ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಬೇಕು ಎಂದರು.

ಶಾಲೆ ಪ್ರಾರಂಭಿಸುವಂತೆ ಎಲ್ಲ ಕಡೆ ಒತ್ತಡ ಬರುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ವಿದ್ಯಾಗಮ ಯೋಜನೆ ಜಾರಿ ಗೊಳಿಸಲಾಗಿದೆ. ಕಲಿಕೆ ವಿಳಂಬವಾದರೆ ಮಕ್ಕಳು ಶಾಲೆಯಿಂದ ಡ್ರಾಪ್ ಔಟ್, ಬಾಲ್ಯ ವಿವಾಹ, ಬಾಲಕಾರ್ವಿುಕ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.

ದಾಖಲೆ ಪತ್ರ ಬೇಡ

ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದೇವೆ. ಈ ವೇಳೆಗಾಗಲೆ10 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕಾಗಿತ್ತು. ಇದು ಸಾಧ್ಯವಾಗಿಲ್ಲ. ಆದ್ದರಿಂದ ಯಾವುದೇ ದಾಖಲೆಗಳನ್ನು ಅಪೇಕ್ಷಿಸದೆ ಮಕ್ಕಳನ್ನು ಶಾಲೆಗೆ ದಾಖಲಿಸಿ ಕೊಳ್ಳಬೇಕು. ಆ.10ರಿಂದ 15ರವರೆಗೆ ದಾಖಲಾತಿ ಅಂದೋಲನದ ಮಾದರಿಯಲ್ಲಿ ನಡೆಯಬೇಕು. ಮಕ್ಕಳ ಮನೆ ಮನೆಗೆ ಪುಸ್ತಕಗಳನ್ನು ತಲುಪಿಸುವ ಕೆಲಸವನ್ನು ಬಿಇಒಗಳು ಮಾಡಬೇಕಿದೆ ಎಂದು ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net