

ಹಳಿಯಾಳ: ಕ್ಷೇತ್ರದಾದ್ಯಂತ ಅತಿವೃಷ್ಟಿಯಿಂದಾಗಿ ಬೆಳೆಗಳು ಹಾನಿಗೀಡಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ರೈತರದ್ದಾಗಿದೆ. ಮೆಕ್ಕೆಜೋಳ, ಭತ್ತ ಸಂಪೂರ್ಣ ಹಾಳಾಗಿದ್ದು, ಕೂಡಲೇ ಅಧಿಕಾರಿಗಳು ಯುದ್ದೊಪಾದಿಯಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿ ನ್ಯಾಯೋಚಿತ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದರು.
ಪಟ್ಟಣದ ನಿವಾಸದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ರೈತರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ಬಾರಿ ಕಬ್ಬು ಸರಿಯಾಗಿ ಬೆಳವಣಿಗೆ ಆಗಿಲ್ಲ. ಆದರೂ ಸುಕ್ರೋಸ್ 10.3 ಪ್ರಮಾಣದಲ್ಲಿದ್ದು ಅರೆಯಲು ಸದೃಢವಾಗಿದೆ ಎಂದ ಅವರು, ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಆದಷ್ಟು ಬೇಗನೆ ಕಬ್ಬು ನುರಿಸಲು ಪ್ರಾರಂಭಿಸಬೇಕು ಎಂದರು.
ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡುಗಡೆಯಾದ ಅನುದಾನಗಳ ಬಗ್ಗೆ ಮಾಹಿತಿ ನೀಡಿದ ಅವರು ಇಂದಿರಾಗಾಂಧಿ ವಸತಿ ಶಾಲೆ, ಸಾಂಬ್ರಾಣಿ(ಎಸ್.ಟಿ.) ಶಾಲಾ ಸಂಕೀರ್ಣ ನಿರ್ಮಾಣಕ್ಕಾಗಿ 22 ಕೋಟಿ ರೂ. ಮಂಜೂರಾಗಿದ್ದು ಇದಕ್ಕಾಗಿ ತಾಲೂಕಿನ ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ 6 ಎಕರೆ ಸರ್ಕಾರಿ ಜಾಗ ಮೀಸಲಿಡಲಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮುರ್ಕವಾಡ (ಎಸ್.ಸಿ.) ಶಾಲಾ ಸಂಕೀರ್ಣ ಕಟ್ಟಡ ನಿರ್ಮಾಣಕ್ಕಾಗಿ 22 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಜೋಗನಕೊಪ್ಪ ಗ್ರಾಮದಲ್ಲಿ 10 ಎಕರೆ ಸರ್ಕಾರಿ ಜಾಗ ಮೀಸಲಿಡಲಾಗಿದೆ. ಎರಡೂ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದರು.
ದಾಂಡೇಲಿಗೆ ಅತ್ಯವಶ್ಯವಾಗಿ ಬೇಕಾಗಿದ್ದ ಅಗ್ನಿಶಾಮಕ ದಳ ಸ್ಥಾಪನೆಗೆ 3 ಕೋಟಿ. ರೂ. ಅನುದಾನ ಮಂಜೂರಾಗಿದ್ದು ಟೆಂಡರ್ ಕರೆಯಲಾಗಿದೆ ಎಂದರು.
ಎಂಎಲ್‌ಸಿ ಗಣಪತಿ ಉಳ್ವೇಕರ ಅವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ತಾಲೂಕಿನ ದುಸಗಿ ಗ್ರಾಮದ ಗೋಶಾಲೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 10 ಲಕ್ಷ ರೂ. ಅನುದಾನ ಮಂಜೂರಾಗಿದೆ. ಜತೆಗೆ ಸಿಎಸ್‌ಆರ್ ನಿಧಿಯಡಿ ವೆಸ್ಟ್‌ಕೋಸ್ಟ್ ಪೇಪರ್ ಮಿಲ್ ಹಾಗೂ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರೂ ಕೂಡ ಶೆಡ್ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಸತ್ಯಜಿತ್ ಗಿರಿ, ಸುಭಾಷ ಕೊರ್ವೇಕರ, ರವಿ ತೋರಣಗಟ್ಟಿ, ಹಾಗೂ ವಿಆರ್‌ಡಿಎಂಟಿ ಟ್ರಸ್ಟ್‌ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.