

ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ ಬಾಕಿ ಉಳಿದಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಉಪ ವಿಭಾಗಾಧಿಕಾರಿ ಮಹೇಶ್ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ಕೊಳ್ಳೇಗಾಲದಿಂದ ಹನೂರಿನವರೆಗೆ 108 ಕೋಟಿ ರೂ. ವೆಚ್ಚದಲ್ಲಿ ಕೆ-ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಆದರೆ ಮಂಗಲ ಗ್ರಾಮದಲ್ಲಿ ಕೆಲವು ಮನೆಗಳ ತೆರೆವು ಸಂಬಂಧ ಒಂದು ವರ್ಷದಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಎಸಿ ಮಹೇಶ್ ಅವರಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ ಎಸಿ, ಗ್ರಾಮಸ್ಥರ ಸಹಕಾರ ಪಡೆದು ಕುಟುಂಬಸ್ಥರನ್ನು ಮನವೊಲಿಸಿದರು. ಬಳಿಕ ಕಾಮಗಾರಿಯನ್ನು ಆರಂಭಿಸಲಾಯಿತಲ್ಲದೆ, ಶೀಘ್ರ ಪೂರ್ಣಗೊಳಿಸುವಂತೆ ಕೆ-ಶಿಪ್ ಎಇಇ ಮುತ್ತಣ್ಣ ಅವರಿಗೆ ಸೂಚಿಸಲಾಯಿತು.
ಗ್ರಾಮದ ಮುಖಂಡರಾದ ಪುಟ್ಟರಾಜು, ಚಿಕ್ಕಸ್ವಾಮಿ, ಕನಕರಾಜು, ಮಾದೇಶ್ ಇತರರು ಇದ್ದರು.