ಫುಟ್‌ಪಾತ್‌ಗಳ ಒತ್ತುವರಿ ತೆರವಿಗೆ ಸೂಚನೆ

23
Published on

ನಗರದ ಹಲವೆಡೆ ಫುಟ್‌ಪಾತ್‌ಗಳು ಒತ್ತುವರಿಯಾಗಿರುವ ಹಿನ್ನೆಲೆಯಲ್ಲಿ ಮೇಯರ್ ಶಿವಕುಮಾರ್ ನಗರ ಪ್ರದಕ್ಷಿಣೆ ನಡೆಸಿ ಸಯ್ಯಜಿರಾವ್ ರಸ್ತೆ ಹಾಗೂ ಅರಮನೆ ಸುತ್ತಲೂ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು.

ನಗರದ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್ ಒತ್ತುವರಿಯಾಗಿ ಪಾದಚಾರಿಗಳು ನಡೆದಾಡಲೂ ಜಾಗವಿಲ್ಲದೆ ಪರದಾಡುವ ಸ್ಥಿತಿ ಇದೆ. ಹಾಗಾಗಿ ಮೇಯರ್ ಶಿವಕುಮಾರ್ ಸೋಮವಾರ ನಗರದ ಹಲವೆಡೆ ಫುಟ್‌ಪಾತ್ ಒತ್ತುವರಿಯಾಗಿರುವ ಬಗ್ಗೆ ಪರಿಶೀಲಿಸಿದರು. ಮೊದಲಿಗೆ ಸಯ್ಯಜಿರಾವ್ ರಸ್ತೆಯಲ್ಲಿ ಪರಿಶೀಲಿಸಿದರು. ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಕಾರಣಕ್ಕೆ ರಸ್ತೆಯ ಒಂದು ಭಾಗದಲ್ಲಿ ಫುಟ್‌ಪಾತ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಅರಮನೆ ಸುತ್ತಲೂ ಪರಿಶೀಲಿಸಿ ಪ್ರವೇಶ ದ್ವಾರ ಸೇರಿದಂತೆ ಹಲವೆಡೆ ಅತಿಕ್ರಮಣವಾಗಿರುವುದನ್ನು ಮನಗಂಡು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೌನ್ಸಿಲ್ ಸಭೆಯಲ್ಲಿ ನಗರದ ಹೃದಯ ಭಾಗದಲ್ಲೇ ಹಲವೆಡೆ ಫುಟ್‌ಪಾತ್ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗಿತ್ತು. ಅದರಂತೆ ಪರಿಶೀಲನೆ ನಡೆಸಿ ತೆರವಿಗೆ ಸೂಚನೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net