ಸಿ ಆ್ಯಂಡ್ ಡಿ ಭೂಮಿ ಸರ್ವೇಗೆ ನೋಟಿಸ್

2spt1
ಸೋಮವಾರಪೇಟೆ ತಾಲೂಕಿನ ಜಕ್ಕನಳ್ಳಿ ಗ್ರಾಮದಲ್ಲಿ ಸಿ ಆ್ಯಂಡ್ ಡಿ ಭೂಮಿಯ ಸೆಕ್ಷನ್-5 ಸರ್ವೆ ಬಗ್ಗೆ ಜಾಗೃತಿ ಸಭೆ ಆಯೋಜಿಸಲಾಗಿತ್ತು. ನಂದೀಶ, ಸುರೇಶ್, ಗ್ರಾಮಸ್ಥರು ಇದ್ದರು.
Published on

ಸೋಮವಾರಪೇಟೆ: ತಾಲೂಕಿನ ಜಕ್ಕನಳ್ಳಿ ಗ್ರಾಮದಲ್ಲಿ ಸಿ ಆ್ಯಂಡ್ ಡಿ ಭೂಮಿಯ ಸೆಕ್ಷನ್-5 ಸರ್ವೇಗೆ ನೋಟಿಸ್ ಬಂದಿರುವ ಹಿನ್ನೆಲೆಯಲ್ಲಿ ಕೃಷಿಕರು ಆತಂಕಕ್ಕೀಡಾಗಿದ್ದಾರೆ.

ರಾಜ್ಯ ಸರ್ಕಾರ ನೇಮಿಸಿರುವ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸೆಕ್ಷನ್-5 ಸರ್ವೇಗೆ ಸುತ್ತೋಲೆ ಹೊರಡಿಸಿರುವುದರಿಂದ ಗ್ರಾಮದಲ್ಲಿ ಗ್ರಾಮಸ್ಥರು ಶುಕ್ರವಾರ ಜಾಗೃತಿ ಸಭೆ ನಡೆಸಿ ಚರ್ಚೆ ನಡೆಸಿದರು.

ತಾಲೂಕು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿ, ಹಲವು ದಶಕಗಳಿಂದ ರೈತರು ವ್ಯವಸಾಯ ಮಾಡುತ್ತಿರುವ ಸಿ ಆ್ಯಂಡ್ ಡಿ ವ್ಯವಸಾಯಕ್ಕೆ ಯೋಗ್ಯವಾದ ಸರ್ಕಾರಿ ಭೂಮಿಯಾಗಿದೆ. ದಾಖಲೆಗಳಲ್ಲಿ ಸಿ ಆ್ಯಂಡ್ ಡಿ ಭೂಮಿ ವ್ಯವಸಾಯಕ್ಕೆ ಯೋಗ್ಯವಲ್ಲ ಎಂಬ ಕಾರಣದಿಂದ ಅರಣ್ಯ ಇಲಾಖೆಗೆ ಸೇರಿಸಲಾಗಿದೆ. ಸಿ ಆ್ಯಂಡ್ ಡಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡರೆ, ಕೊಡಗಿನ ಬಹುತೇಕ ರೈತರು ಆಸ್ತಿ ಕಳೆದುಕೊಂಡು ಗುಳೆ ಹೋಗಬೇಕಾದ ಅನಿವಾರ್ಯತೆ ಎದುರಾಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರನ್ನು ರಕ್ಷಣೆ ಮಾಡುವಂತಹ ಎಲ್ಲ ಅವಕಾಶಗಳಿವೆ. ಈಗಾಗಲೇ ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರ ಪಡೆದುಕೊಳ್ಳಲು ಹೋರಾಟ ನಡೆಯುತ್ತಿದೆ.

ಸರ್ವೇಗೆ ನೋಟಿಸ್ ಬಂದರೆ ಪ್ರತಿಯೊಬ್ಬ ರೈತರು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ತಕರಾರು ಅರ್ಜಿಗಳನ್ನು ಸಲ್ಲಿಸಬೇಕು ಎಂದು ಹೇಳಿದರು. ಈಗಾಗಲೇ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಕಾನೂನಿನ ಮೂಲಕ ಹೋರಾಟ ಮುಂದುವರಿಸಲಾಗುತ್ತದೆ. ರೈತರು ಭಯಭೀತರಾಗಬಾರದು. ಹೋರಾಟ ಮಾಡಿಯಾದರೂ ಕೃಷಿ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಿತಿಯ ಪದಾಧಿಕಾರಿಗಳಾದ ಪೃಥ್ವಿ ಗೌಡಳ್ಳಿ, ಹರಗ ಆದಿತ್ಯ, ಜಕ್ಕನಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ನಂದೀಶ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net