ಅಪಘಾತ ಸ್ಥಳದ ಸರ್ವೇಗೆ ಸೂಚನೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

1 (1)
Published on

ಮಂಡ್ಯ: ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ನಾಲೆ ಹೋಗುವ ಕಡೆ ಎಲ್ಲೆಲ್ಲಿ ತಡೆಗೋಡೆಯಿಲ್ಲ ಎಂಬುದನ್ನು ಗುರುತಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಮಿಮ್ಸ್‌ಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತ ನಡೆಯಬಹುದಾದ ಸಂಭವನೀಯ ಸ್ಥಳ ಯಾವುದೆಂದು ಸರ್ವೇ ಮಾಡಲಾಗುವುದು. ತದನಂತರ ಎಲ್ಲ ಕಡೆ ಸೂಕ್ತ ಭದ್ರತೆ ಮಾಡುತ್ತೇವೆ. ಇಂತಹ ಸ್ಥಳಗಳಲ್ಲಿ ಜನರು ಸಹ ಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಲಾಗುವುದು. ನನ್ನ ಹಾಗೂ ಸಚಿವ ಮಹದೇವಪ್ಪರ ಮನವಿ ಮೇರೆಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಮಂಡ್ಯ ಹಾಗೂ ಮೈಸೂರು ಜಿಲ್ಲಾಕಾರಿಗಳು ಪರಿಹಾರಕ್ಕೆ ವರದಿ ನೀಡಲಿದ್ದಾರೆ. ಈಗ ವೈಯಕ್ತಿಕವಾಗಿ ತಲಾ 50 ಸಾವಿರ ರೂ ಪರಿಹಾರ ನೀಡಲಾಗಿದೆ. ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಲು ಮುಖ್ಯಮಂತ್ರಿ ಬಳಿ ಮನವಿ ಮಾಡಲಾಗುವುದು. ಈ ರೀತಿಯ ಘಟನೆ ನಡೆಯಬಾರದಿತ್ತು. ಈ ದುರಂತದಲ್ಲಿ ನಾಲ್ವರು ಸಾವನ್ನಪ್ಪಿರುವುದು ದುಃಖಕರ ವಿಚಾರ ಎಂದು ವಿಷಾದಿಸಿದರು.

ತಡೆಗೊಡೆ ಇಲ್ಲದೇ ಕಳೆದ ಮೂರು ದಿನದ ಹಿಂದೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ಒಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ತಡೆಗೋಡೆ ಇದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಸಾವು ಎಂಬುದು ಹೇಗೆ ಬರುತ್ತದೆ ಎಂದು ಗೊತ್ತಿಲ್ಲ. ಕೆಲವರು ಬಿಲ್ಡಿಂಗ್ ಮೇಲಿಂದ ಬಿದ್ದರೂ ಬದುಕುತ್ತಾರೆ. ಇನ್ನೂ ಕೆಲವರು ಎಡವಿ ಬಿದ್ದರೆ ಸಾವನ್ನಪ್ಪುತ್ತಾರೆ. ಸಾಂತ್ವನ ಹೇಳುವುದು ಸುಲಭ, ಆದರೆ ಆ ನೋವು ಕುಟುಂಬದವರಿಗೆ ಮಾತ್ರ ಗೊತ್ತಿರುತ್ತದೆ. ವಿಶ್ವೇಶ್ವರಯ್ಯ ನಾಲೆಯ ವ್ಯಾಪ್ತಿಯಲ್ಲಿ ಕೆಲ ಕಾಮಗಾರಿ ಬಾಕಿ ಇದೆ. ಈಗಾಗಲೇ ಕಾಮಗಾರಿಗಳು ಮಂಜೂರು ಆಗಿವೆ. ಇನ್ನೂ ಕೆಲಸಗಳು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಈ ಘಟನೆ ನಡೆದಿರುವುದು ದುಃಖದ ಸಂಗತಿ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಮುಂಜಾಗ್ರತೆ ಕ್ರಮವಾಗಿ ಸಹಕರಿಸಿದ್ದಾರೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ಪರಿಹಾರದ ಹಣ ನೀಡಲಾಗುವುದು. ನಾನು ಸಹ ವೈಯಕ್ತಿಕ ಪರಿಹಾರ ನೀಡಿದ್ದೇನೆ ಎಂದರು.

ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎನ್.ಯತೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ನಹೀಂ, ವಿಜಯಲಕ್ಷ್ಮೀ ರಘುನಂದನ್, ಸಿ.ಎಂ.ದ್ಯಾವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net