ಹೋಟೆಲ್, ರೆಸ್ಟೋರೆಂಟ್‌ಗಳಿಗೆ ನೋಟಿಸ್

drive
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಆಹಾರ ಉದ್ದಿಮೆಗಳ ಪರಿಶೀಲನೆ ವಿಶೇಷ ಆಂದೋಲನ ಅಂಗವಾಗಿ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಧಿಕಾರಿಗಳು ಜಿಲ್ಲೆಯ ಹಲವು ಆಹಾರ ಉದ್ದಿಮೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸುರಕ್ಷಾ ನಿಯಮದಲ್ಲಿ ಲೋಪ ಕಂಡುಬಂದ 4 ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಿ 10 ಸಾವಿರ ರೂ ದಂಡ ವಿಧಿಸಲಾಗಿದೆ.

ಆಹಾರ ಮಳಿಗೆಗಳಲ್ಲಿ ಆಹಾರ ಸುರಕ್ಷತೆಗೆ ಒತ್ತು ನೀಡುತ್ತಿಲ್ಲ, ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಅಧಿಕಾರಿಗಳು ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ತಪಾಸಣೆ ಚುರುಕುಗೊಳಿಸಿದ್ದಾರೆ.

ಜಿಲ್ಲಾಧಿಕಾರಿ ತಾಕೀತು: ಹೆದ್ದಾರಿಗಳಲ್ಲಿನ ಡಾಬಾ, ರಸ್ತೆ ಬದಿ ಹೋಟೆಲ್, ರೆಸ್ಟೋರೆಂಟ್, ಕ್ಯಾಂಟೀನ್‌ಗಳಲ್ಲಿ ಆಹಾರ ಸುರಕ್ಷತೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬುದರ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಇಂಥ ಸ್ಥಳಗಳಲ್ಲಿನ ಅಹಾರ ಘಟಕಗಳಲ್ಲಿ ಆಹಾರದ ಗುಣಮಟ್ಟ ಕಾಯ್ದುಕೊಳ್ಳದೇ ವ್ಯಾಪಾರ ನಡೆಸುತ್ತಿರುತ್ತಾರೆ ಎಂಬ ಮಾಹಿತಿ ಇದೆ. ಅಂತಹ ಸ್ಥಳಗಳಲ್ಲಿ ಆಹಾರ ಸೇವನೆ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆನಾರೋಗ್ಯಗಳಿಗೆ ದಾರಿ ಮಾಡಿಕೊಡುತ್ತವೆ ಕೆಲವು ವೇಳೆ ಪ್ರಾಣಾಪಾಯದ ಸಾಧ್ಯತೆಗೂ ದಾರಿ ಮಾಡಿಕೊಡುತ್ತದೆ ಆದ್ದರಿಂದ ಈ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಾಲಕಾಲಕ್ಕೆ ದಿಢೀರ್ ದಾಳಿ ತಪಾಸಣೆ ಮುಂದುವರೆಸಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದ್ದಾರೆ. ಕಳೆದ ಡಿಸಿ ಸಭೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದು ಅಧಿಕಾರಿಗಳ ತಪಾಸಣೆ ಚುರುಕುಗೊಂಡಿದೆ.

23 ಉದ್ದಿಮೆಗಳಿಗೆ ಭೇಟಿ: ಗುರುವಾರ ಏಕಕಾಲದಲ್ಲಿ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಇರುವ 23 ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ನೀರಿನ ಮಾದರಿ ಪರೀಕ್ಷೆ: ಆಹಾರ ಉದ್ದಿಮೆಗಳಲ್ಲಿ ಆಹಾರ ತಯಾರಿಸಲು ಹಾಗೂ ಕುಡಿಯಲು ಶುದ್ಧ ನೀರು ಬಳಸುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದ್ದು ಹಲವು ಉದ್ದಿಮೆಗಳಲ್ಲಿ ಬಳಸುತ್ತಿರುವ ನೀರಿನ ಮಾದರಿಯನ್ನು ಸಂಗ್ರಹಿಸಿರುವ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪರೀಕ್ಷಾ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಗುಣಮಟ್ಟದ ಜಾಗೃತಿ: ಆಹಾರ ಉದ್ದಿಮೆದಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸಿದರು. ಆಹಾರ ಉದ್ದಿಮೆ ಸ್ಥಳದಲ್ಲಿ ಪರಿಸರ ನೈರ್ಮಲ್ಯವಾಗಿರಬೇಕು, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು, ಕುಡಿಯುವ ನೀರಿನ ಪರಿಶೀಲನೆ ಮಾಡಿ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ನೀಡಬೇಕೆಂದು ಸೂಚನೆ ನೀಡಿ, ಕರಪತ್ರ ವಿತರಿಸಲಾಯಿತು.

ಲೈಸೆನ್ಸ್ ಪರೀಕ್ಷೆ: ಕೆಲವು ಆಹಾರ ಘಟಕಗಳು ಲೈಸೆನ್ಸ್( ಪರವಾನಗಿ) ಪಡೆಯದೇ ನಡೆಸುತ್ತಿರುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಲವು ಆಹಾರ ಉದ್ದಿಮೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಲೈನೆನ್ಸ್‌ಗಳನ್ನು ಪರಿಶೀಲನೆ ನಡೆಸಿದರು. ಆಹಾರ ತಯಾರಿಕೆ ಘಟಕಗಳು ಕಡ್ಡಾಯವಾಗಿ ಪರವಾನಗಿ ಪಡೆದಿರಬೇಕು ಅಧಿಕಾರಿಗಳ ಪರಿಶೀಲನೆ ವೇಳೆ ಅದನ್ನು ತೋರಿಸಬೇಕು ಜತೆಗೆ ಹೋಟೆಲ್‌ಗಳಲ್ಲಿ ಸಾರ್ವಜನಿಕವಾಗಿ ಕಾಣುವಂತೆ ಲೈಸೆನ್ಸ್ ಪ್ರದರ್ಶಿಸಿರಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು.

ಆಹಾರ ಉದ್ದಿಮೆಗಳ ಪರಿಶೀಲನೆ ವಿಶೇಷ ಆಂದೋಲನ ಅಂಗವಾಗಿ ಗುರುವಾರ ಏಕಕಾಲದಲ್ಲಿ ಗ್ರಾಮಾಂತರ ಜಿಲ್ಲೆಯ ಹಲವು ಆಹಾರ ಉದ್ದಿಮೆಗಳ ಪರಿಶೀಲನೆ ನಡೆಸಲಾಯಿತು. ಇವುಗಳ ಪೈಕಿ ಲೋಪ ಕಂಡುಬಂದ ಆಹಾರ ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಆಹಾರ ಉದ್ದಿಮೆಗಳಲ್ಲಿ ಸುರಕ್ಷತೆ ಗುಣಮಟ್ಟ ನೈರ್ಮಲ್ಯ ಕಾಪಾಡುವಂತೆ ಅರಿವು ಮೂಡಿಸಲಾಗಿದೆ.

ಡಾ.ಬಿ.ಧರ್ಮೇಂದ್ರ, ಆಹಾರ ಸುರಕ್ಷತೆ ಅಂಕಿತಾಧಿಕಾರಿ ಗ್ರಾಮಾಂತರ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net