

ತುಮಕೂರು: ಪೊಲೀಸರಿಲ್ಲ ಎಂದು ತಿಳಿದುಕೊಂಡು ತುಮಕೂರು ನಗರದ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಹುಡುಕಿಕೊಂಡು ಇನ್ಮುಂದೆ ಮನೆಗೆ ಬರಲಿದೆ ದಂಡದ ನೋಟಿಸ್.
ಹೌದು, ಸ್ಮಾರ್ಟ್‌ಸಿಟಿ ಯೋಜನೆಯ ದುಭಾರಿ ವೆಚ್ಚದಲ್ಲಿ ನಗರದ 8 ಪ್ರಮುಖ ವೃತ್ತದಲ್ಲಿ ಅಳವಡಿಸಿರುವ ಅತ್ಯಾಧುನಿಕ ಸಿಸಿ ಕ್ಯಾಮರಾ ಮೂಲಕ ಕಾರ್ಯನಿರ್ವಹಿಸುವ ‘ಆಟೋಮ್ಯಾಟಿಕ್ ಚಾಲೆಂಜಿಂಗ್ ಸಿಸ್ಟಮ್’ ಫೆ.11ರಿಂದ ಕಾರ್ಯಾರಂಭ ಮಾಡಲಿದ್ದು, ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ.
ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದಿರುವುದು, ಮೂವರು ಸಂಚರಿಸುವುದು, ಸಿಗ್ನಲ್ ಜಂಪ್ ಮತ್ತಿತರರ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನದ ನೋಂದಣಿ ಸಂಖ್ಯೆಯನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ‘ವಾಹನ್ ಡೇಟಾಬೇಸ್’ಗೆ ಹೊಂದಾಣಿಕೆಯಾಗುವುದು ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ದಂಡದ ನೋಟಿಸ್ ಮಾಲೀಕನ ಮನೆಗೆ ತಲುಪಲಿದೆ.
ಫೆ.11ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ತುಮಕೂರಿನಲ್ಲಿ ಸಂಚರಿಸುವ ಎಲ್ಲ ವಾಹನಗಳ ವಿವರಗಳು ನೇರವಾಗಿ ‘ವಾಹನ್ ಡೇಟಾಬೇಸ್’ಗೆ ಲಿಂಕ್ ಆಗಿದ್ದು ನಿಯಮ ಉಲ್ಲಂಘಿಸುವವ ವಿವರ ಕ್ಷಣಮಾತ್ರದಲ್ಲಿ ಪೊಲೀಸರಿಗೆ ಲಭ್ಯವಾಗಲಿದೆ, ತಕ್ಷಣವೇ ‘ಆಟೋಮ್ಯಾಟಿಕ್ ಚಾಲೆಂಜಿಂಗ್ ಸಿಸ್ಟಮ್’ ಮೂಲಕ ವಿಧಿಸಲಾದ ದಂಡದ ಚಲನ್ ನೇರವಾಗಿ ವಾಹಮ ಮಾಲೀಕನ ಮನೆಗೆ ಬರಲಿದೆ.
ಕಡಿಮೆಯಾಗುತ್ತೆ ಸಂಘರ್ಷ : ಪೊಲೀಸರು ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ರಸ್ತೆಯಲ್ಲಿ ತಡೆದು ವಿಧಿಸುತ್ತಿರುವ ದಂಡದ ಬಗ್ಗೆಯೂ ಸಾಕಷ್ಟು ದೂರುಗಳು ಸಾರ್ವಜನಿಕ ವಲಯದಲ್ಲಿವೆ. ಪೊಲೀಸರಿಗೆ ದಂಡ ವಿಧಿಸುವುದೇ ಪ್ರಮುಖ ಉದ್ದೇಶವಾಗಿದ್ದು ವಾಹನಗಳನ್ನು ತಡೆದು ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ಏನಾದರೂ ಸರಿಯೇ ದಂಡ ಹಾಕುವುದನ್ನೇ ಪ್ರಮುಖ ಕೆಲಸವಾಗಿಸಿಕೊಂಡಿದ್ದಾರೆ ಎಂಬ ದೂರು ವಾಹನ ಸವಾರರದ್ದು. ಪ್ರಸ್ತುತ ಅತ್ಯಾಧುನಿಕ ‘ಆಟೋಮ್ಯಾಟಿಕ್ ಚಾಲೆಂಜಿಂಗ್ ಸಿಸ್ಟಮ್’ ನಗರದಲ್ಲಿ ವಾಹನ ಸಾವರರು ಹಾಗೂ ಪೊಲೀಸರ ನಡುವೆ ಸದಾ ನಡೆಯುವ ಸಂಘರ್ಷವನ್ನು ಕಡಿಮೆ ಮಾಡಿಸಬಹುದು ಜತೆಗೆ ಯಾವ ಪೊಲೀಸರ ಭಯವೂ ಇಲ್ಲದೆ ಜನರು ಸಂಚಾರ ನಿಯಮಗಳ ಪಾಲನೆಗೂ ಮುನ್ನುಡಿಯಾಗಬಹುದು.
ಸಾರ್ವಜನಿಕರಿಂದ ಸಂಚಾರಿ ನಿಮಯ ಉಲ್ಲಂಘನೆ ಮಾಡಿದಾಗ ದಂಡ ವಾಪತಿಸುವುದೇ ಮುಖ್ಯ ಉದ್ದೇಶವಲ್ಲ, ನಿಯಮ ಪಾಲನೆ ಮೂಲಕ ಅಪಘಾತಗಳನ್ನು ತಪ್ಪಿಸಿ ಅಮೂಲ್ಯ ಜೀವ ರಕ್ಷಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜತೆ ಸಹಯೋಗದಲ್ಲಿ ‘ಆಟೋಮ್ಯಾಟಿಕ್ ಚಾಲೆಂಜಿಂಗ್ ಸಿಸ್ಟಮ್’ ಫೆ.11ರಿಂದ ಕಾರ್ಯಾರಂಭ ಮಾಡಲಿದ್ದು ಸಾರ್ವಜನಿಕರು ಸಹಕಾರ ನೀಡಬೇಕು. ಬಿ.ಟಿ.ರಂಗಸ್ವಾಮಿ ಎಂಡಿ, ತುಮಕೂರು ಸ್ಮಾರ್ಟ್‌ಸಿಟಿ ಯೋಜನೆ