ದಲಿತರ ಮಕ್ಕಳೆಲ್ಲ ಅಂಬೇಡ್ಕರ್​, ಭಗವಾನ್​ ಬುದ್ಧನಂತಾಗಲಿ

Ambedkar
ಉಡುಪಿಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್​ಬುಕ್​ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿಕೇತ್​ ರಾಜ್​ ಮೌರ್ಯ ಉದ್ಘಾಟಿಸಿದರು. ಜಯನ್​ ಮಲ್ಪೆ, ಮುನೀರ್​ ಕಾಟಿಪಳ್ಳ, ಹರೀಶ್​ ಸಾಲ್ಯಾನ್​, ಸಂಜೀವ್​ ಬಳ್ಕೂರು, ವಾಸುದೇವ ಮುದ್ದೂರು ಇತರರಿದ್ದರು.
Published on

ವಿದ್ಯಾರ್ಥಿಗಳಿಗೆ ನಿಕೇತ್​ರಾಜ್​ ಮೌರ್ಯ ಕರೆ | ಪ್ರತಿಭಾ ಪುರಸ್ಕಾರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಮೌಢ್ಯ, ಕಂದಾಚಾರಗಳು ಇಂದಿಗೂ ಸಹ ಸಮಾಜದಲ್ಲಿ ಜೀವಂತವಾಗಿದ್ದು ಅವುಗಳನ್ನೆಲ್ಲ ಎದುರಿಸಿ ಬದುಕುವ ಸಾಹಸ ಮಾಡಲೇಬೇಕಿದೆ. ತಾವುಗಳೂ ಉನ್ನತ ಶಿಕ್ಷಣ ಗಳಿಸಿ ಹಿಂದುಳಿದವರು ಹಾಗೂ ದಲಿತ ಸಮಾಜದ ಏಳ್ಗೆಗಾಗಿ ಡಾ. ಅಂಬೇಡ್ಕರ್​ ಹಾಗೂ ಭಗವಾನ್​ ಬುದ್ಧನಂತೆ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರಗತಿಪರ ಚಿಂತಕ, ಇತಿಹಾಸ ತಜ್ಞ ನಿಕೇತ್​ರಾಜ್​ ಮೌರ್ಯ ಕರೆ ನೀಡಿದರು.

ಉಡುಪಿ ಬನ್ನಂಜೆಯ ಶ್ರೀ ನಾರಾಯಣ ಗುರು ಆಡಿಟೋರಿಯಂನಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್​ ಸೇನೆ ಭಾನುವಾರ ಆಯೋಜಿಸಿದ್ದ ಅಕ್ಷರ-ಬೆಳಕು ಉಚಿತ ನೋಟ್​ ಬುಕ್​ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಚಾರಧಾರೆಗೆ ಬರ

ದಲಿತ ಸಮಾಜದ ವಿದ್ಯಾರ್ಥಿಗಳು ಜ್ಞಾನ ಗಳಿಕೆಗಾಗಿ ಅಂಬೇಡ್ಕರ್​ ಆಗಬೇಕು. ಜಗತ್ತನ್ನೇ ಪ್ರೀತಿಸಲು ಬುದ್ಧನಾಗಬೇಕು. ಸಮಾಜಕ್ಕೆ ಬರ ಆವರಿಸಿಲ್ಲ. ನಮ್ಮೆಲ್ಲರ ವಿಚಾರಧಾರೆಗಳಿಗೆ ಬರ ಆವರಿಸಿದೆ. ದಲಿತ ಸಮಾಜದಿಂದ ಡಾಕ್ಟರ್​, ನ್ಯಾಯಾಧೀಶ, ಐಎಎಸ್​ ಅಧಿಕಾರಿಗಳಾದವರು ಸಂವಿಧಾನ ಉಳಿಸುವ ಕಾರ್ಯ ಮಾಡಬೇಕು. ಸಂವಿಧಾನ ಉಳಿದರೆ ಮಾತ್ರ ಸಮಾನತೆ ಸಾಧ್ಯ. ಸಂವಿಧಾನ ದೇವರ ಮನೆಯಲ್ಲಿಡುವ ಪುಸ್ತಕವಲ್ಲ. ಅದು ವಿದ್ಯಾರ್ಥಿಗಳ ಜತೆ ಸದಾ ಇರುವ ಪುಸ್ತಕ ಹಾಗೂ ಮಸ್ತಕದ ಜತೆಯಲ್ಲೇ ಇರಬೇಕು ಎಂದರು.

ಎಲ್ಲೆಡೆ ಮೀಸಲಾತಿ ಇರಲಿ

ಡಿವೈಎಫ್​ಐ ರಾಜ್ಯಾಧ್ಯಕ್ಷ ಮುನೀರ್​ ಕಾಟಿಪಳ್ಳ ಬೆಂಗಳೂರು ಮಾತನಾಡಿ, ಖಾಸಗೀಕರಣದಿಂದಾಗಿ ಕೆಳ ವರ್ಗದವರಿಗೆ ಉದ್ಯೋಗ ಲಭಿಸುತ್ತಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳಲ್ಲೂ ಸಹ ಮೀಸಲಾತಿ ಜಾರಿಯಾಗಬೇಕು. ಕೆಲವೆಡೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಲಭಿಸಿದ್ದರೂ ಸಹ ಜೀವನಕ್ಕೆ ಭದ್ರತೆ ಇಲ್ಲದಾಗಿದೆ. ಪದವಿ ಮುಗಿಸಿದ ಎಷ್ಟೋ ಜನರು ಅತ್ಯಂತ ಕನಿಷ್ಠ ವೇತನಕ್ಕೆ ಪೆಟ್ರೋಲ್​ ಪಂಪ್​ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉದ್ಯೋಗಕ್ಕಾಗಿಯೂ ಹೋರಾಟ ಮಾಡಬೇಕಿದೆ ಎಂದರು.

ಅಂಬೇಡ್ಕರ್​ ಯುವಸೇನೆಯ ಅಧ್ಯಕ್ಷ ಹರೀಶ್​ ಸಾಲ್ಯಾನ್​ ಅಧ್ಯಕ್ಷತೆ ವಹಿಸಿದ್ದರು. ವಾಸುದೇವ ಮುದ್ದೂರು, ಸಂಜೀವ ಬಳ್ಕೂರು, ಶ್ರೀರಾಮ ದಿವಾನ್​ ಉಪಸ್ಥಿತರಿದ್ದರು. ಶಂಕರದಾಸ್​ ಚಂಡ್ಕಳ್ಳಿ ಪ್ರಾರ್ಥಿಸಿದರು. ಸತೀಶ್​ ಮಂಚಿ ಸ್ವಾಗತಿಸಿದರು. ಸತೀಶ್​ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ

ಪ್ರಗತಿಪರ ಚಿಂತಕ ಜಯನ್​ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿ, ದಲಿತ ವಿದ್ಯಾರ್ಥಿಗಳೆಲ್ಲ ಶಿಕ್ಷಣ ಪಡೆದು ಅಂಬೇಡ್ಕರ್​ ಕಂಡ ಕನಸು ನನಸು ಮಾಡಬೇಕು. ತಾವುಗಳೂ ಸಹ ಫಸ್ಟ್​ ರ್ಯಾಂಕ್​ ಬರಬೇಕು ಎಂದು ಸಲಹೆ ನೀಡಿದರು. ಎಸ್​ಎಸ್​ಎಲ್​ಸಿಯಲ್ಲಿ ಸಾಧನೆ ಮಾಡಿದ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾಲ್ಕೈದು ದಲಿತೇತರ ಕುಟುಂಬಗಳೂ ಸೇರಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್​ಬುಕ್​ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net