

ಕೊಳ್ಳೇಗಾಲ: ಪಟ್ಟಣದ ಬಾಪುನಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಶ್ರೀ ಭಗವಾನ್ ವಾಲ್ಮೀಕಿ ಟ್ರಸ್ಟ್‌ನಿಂದ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ಶ್ರೀ ಭಗವಾನ್ ವಾಲ್ಮೀಕಿ ಟ್ರಸ್ಟ್ ಬಡ ಮಕ್ಕಳ ಓದಿಗೆ ಅನುಕೂಲವಾಗಲಿ ಎಂದು ಇಂದು ಪುಸ್ತಕ ವಿತರಣೆ ಮಾಡಿರುವುದು ನಿಜಕ್ಕೂ ಒಳ್ಳೆಯ ಕಾರ್ಯವಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಎಲ್ಲ ವಿದ್ಯಾರ್ಥಿಗಳು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು ಎಂದರು.
ಶ್ರೀ ಭಗವಾನ್ ವಾಲ್ಮೀಕಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ನಿವೃತ್ತ ಚಿತ್ರಕಲಾ ಶಿಕ್ಷಕ ಆರ್.ರಘು ಮಾತನಾಡಿ, ಪ್ರೌಢಶಿಕ್ಷಣ ಶೈಕ್ಷಣಿಕ ಪ್ರಗತಿಗೆ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಪಠ್ಯ-ಪುಸ್ತಕ ಅಭ್ಯಾಸ ಮಾಡಬೇಕು. ಪರೀಕ್ಷೆ ಹತ್ತಿರದಲ್ಲಿ ಓದಿನ ಸಿದ್ಧತೆ ಕೈಗೊಳ್ಳುವ ಬದಲಿಗೆ ಆ ದಿನದ ಪಾಠಗಳನ್ನು ಅಂದೇ ಕಲಿಯಬೇಕು. ಇದರಿಂದ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಲಿದೆ ಎಂದರು.
ಮುಖ್ಯಶಿಕ್ಷಕಿ ಮಂಜುಳಾ, ಸಹಶಿಕ್ಷಕ ಎಂ.ಕೆ.ನಿರ್ಮಲಾ, ಸುಶೀಲಾ, ಎಂ.ಮಹದೇವ ನಾಯಕ, ವಸಂತ, ಎಂ.ಅನಿತಾ, ಶಾಂತರಾಜು, ಸೌಮ್ಯಾ, ಲಿಂಗರಾಜು ಇದ್ದರು.