

ವಿಜಯವಾಣಿ ಸುದ್ದಿಜಾಲ ವಿಜಯಪುರ
ಮನೆಗಳಲ್ಲಿ ಏನೇ ತೊಂದರೆ ಇದ್ದರೂ ಪಾಲಕರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ್ ತಿಳಿಸಿದರು.
ಪಟ್ಟಣ ಸಮೀಪದ ನಾರಾಯಣಪುರ ಸರ್ಕಾರಿ ಫ್ರೌಡಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದರು. ಆಯಾ ಶಾಲೆಗಳ ಎಸ್‌ಡಿಎಂಸಿ ಹಾಗೂ ಶಾಲಾ ಶಿಕ್ಷಕರು ಶಾಲೆ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಮುತುವರ್ಜಿ ವಹಿಸಬೇಕು. ಸರ್ಕಾರಿ ಶಾಲೆಗಳ ಕಡೆಗೆ ಮಕ್ಕಳನ್ನು ಸೆಳೆಯುವುದು ಮಾತ್ರವಲ್ಲ, ಅಲ್ಲಿನ ಸೌಲಭ್ಯಗಳ ಬಗ್ಗೆಯೂ ಪಾಲಕರಿಗೆ ಮಾಹಿತಿ ನೀಡಬೇಕು ಎಂದರು.
ತಾಲೂಕು ಶಸಾಪ ಅಧ್ಯಕ್ಷ ವ.ಸುರೇಶ್ ಬಾಬು ಮಾತನಾಡಿ, ಪಾಲಕರು ಮಕ್ಕಳಲ್ಲಿ ಪುಸ್ತಕ ಪ್ರೇಮ ಬೆಳೆಸಲು ಪೂರಕವಾಗಿ ಸ್ಪಂದಿಸಬೇಕು. ಅಂದರೆ, ಉತ್ತಮವಾದ ಓದಿಗೆ ಎಲ್ಲ ರೀತಿಯ ಅನುಕೂಲಕರ ವಾತಾವರಣ ಕಲ್ಪಿಸಿಕೊಡಬೇಕು. ನಿಮ್ಮ ಮಕ್ಕಳಿಗೆ ಏನಾದರೂ ಉಡುಗೊರೆ ಕೊಡುವ ಅಭ್ಯಾಸ ಇಟ್ಟುಕೊಂಡಿದ್ದರೆ, ಪುಸ್ತಕವನ್ನೇ ಕೊಡಿ. ಮಕ್ಕಳೂ ಓದಿನ ಮೂಲಕವೇ ಸಂಪೂರ್ಣವಾದ ಓದು ಬರಹದ ಕೌಶಲ ಮಾತ್ರವಲ್ಲ, ಕ್ರಿಯಾಶೀಲ ಯೋಚನಾ ವಿಧಾನವನ್ನು ಬೆಳೆಸಿಕೊಳ್ಳುತ್ತಾರೆ ಎಂದರು.
ಮುಖ್ಯಶಿಕ್ಷಕ ಕೋಟ್ರೇಶ್ ಮಾತನಾಡಿ, ದಾನಿಗಳ ಸಹಾಯ ಪಡೆದು, ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗುತ್ತಿದೆ. ಮಕ್ಕಳು ಹೆಚ್ಚಿಗೆ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸಕ್ಕೆ ಒತ್ತು ಕೊಡಬೇಕು ಎಂದರು.
ಶಸಾಪ ಸದಸ್ಯರಾದ ಭಾರತಿ ಜಗದೀಶ್, ಎಸ್‌ಡಿಎಂಸಿ ಅಧ್ಯಕ್ಷೆ ರೂಪಾ, ಗ್ರಾಪಂ ಸದಸ್ಯರಾದ ಮುರಳಿ, ಕೋಮಲಾ ಬಸವರಾಜು, ಶಿಕ್ಷಕರಾದ ಕನ್ನಡ ಸಹಶಿಕ್ಷಕ ಗಂಗರಾಜು, ದೈಹಿಕ ಶಿಕ್ಷಣ ಶಿಕ್ಷಕ ಬಾಲಚಂದ್ರ, ಅಂಜನೇಯ್ಯರೆಡ್ಡಿ, ಎನ್.ಸುಷ್ಮಾ, ಎಂ.ವೆಂಕಟೇಶಪ್ಪ, ಡಿ.ಯಾಸ್ಮಿನ್, ಎಲ್.ಸೌಂದರ್ಯ ಇದ್ದರು.