

ವಿಜಯವಾಣಿ ಸುದ್ದಿಜಾಲ ಆನೇಕಲ್
ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಉತ್ತಮ ಶಿಕ್ಷಣ ಪಡೆದವರು ಉನ್ನತ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮೀ ಅಭಿಪ್ರಾಯಪಟ್ಟರು.
ತಾಲೂಕಿನ ಬ್ಯಾಗಡದೇನಹಳ್ಳಿಯಲ್ಲಿ ತಾಲೂಕು ಛಲವಾದಿ ಮಹಾಸಭಾದಿಂದ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆ ಹಾಗೂ ಮಾತೃಭಾಷೆಯಲ್ಲೇ ವ್ಯಾಸಂಗ ಮಾಡಿದ ಸಾವಿರಾರು ಮಂದಿ ಉನ್ನತ ಹುದ್ದೆಗಳಲ್ಲಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ತೊರೆದು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ ಸಾಧಕರಾಗಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮುಂದಾಗಿರುವುದು ಶ್ಲಾಘನೀಯ. ಹಲವಾರು ಕೈಗಾರಿಕೆಗಳು ತಾಲೂಕಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿವೆ. ತಾಲೂಕಿನ ಬನಹಳ್ಳಿ ಮತ್ತು ಮುತ್ತಗಟ್ಟಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ ಕಲಿಕೋಪಕರಣ ವಿತರಿಸಲಾಯಿತು.
ಮುಖಂಡರಾದ ಬಳ್ಳೂರು ಮುನಿವೀರಪ್ಪ, ರಾಜಪ್ಪ, ಅನಿಲ್‌ರೆಡ್ಡಿ, ನಾಗೇಶ್, ಕೂಗೂರು ಬಸವರಾಜಜು, ಸುದರ್ಶನ್, ಬಳ್ಳೂರು ಮುನಿಯಪ್ಪ, ಮುರುಗೇಶ್, ನಂಜಪ್ಪ, ಚಂದ್ರಶೇಖರ್, ಬೆಟ್ಟಪ್ಪ, ಸೋಮಣ್ಣ, ಸಿಆರ್‌ಪಿ ಮುನಿಕೃಷ್ಣಪ್ಪ ಇದ್ದರು.