

ಕೋಲಾರ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಕೃತಿ ವಿಕೋಪ ನಿಧಿಯಿಂದ ಖರೀದಿ ಮಾಡಿರುವ ವೆಂಟಿಲೇಟರ್ಗಳು ಉಪಯೋಗಕ್ಕೆ ಬಾರದೆ ತುಕ್ಕು ಹಿಡಿಯುತ್ತಿವೆ.
ಕರೊನಾದಿಂದ ಉಸಿರಾಟ ಸಮಸ್ಯೆ ಇರುವ ಜನರು ಅದರಲ್ಲೂ ವೃದ್ಧರು, ಸಕ್ಕರೆ, ಬಿಪಿ, ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೇಗ ಸೋಂಕು ತಗುಲುವುದರಿಂದ ಇವರ ರಕ್ಷಣೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ವೆಂಟಿಲೇಟರ್ಗಳನ್ನು ಸಜ್ಜುಗೊಳಿಸುವಂತೆ ಆರೋಗ್ಯ ತಜ್ಞರ ಸಲಹೆ ಮೇರೆಗೆ ಜಿಲ್ಲಾಡಳಿತ 35 ವೆಂಟಿಲೇಟರ್ ಖರೀದಿಸಿದೆ.
ಪ್ರತಿ ವೆಂಟಿಲೇಟರ್ಗೆ 7ರಿಂದ 22 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಸ್ತಾನು ಮಾಡಲಾಗಿದೆಯಾದರೂ ಒಂದೇ ಒಂದು ವೆಂಟಿಲೇಟರನ್ನು ಈವರೆಗೆ ಕೋವಿಡ್ ವಾರ್ಡ್ನಲ್ಲಿ ಅಳವಡಿಸದಿರುವುದಕ್ಕೆ ತಂತ್ರಜ್ಞರ ಕೊರತೆಗಿಂತ ಇಚ್ಛಾಶಕ್ತಿಯ ಕೊರತೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಜಿಲ್ಲಾಡಳಿತ ಉತ್ತರಿಸಲಿ: ಕಳೆದ 6-7 ತಿಂಗಳ ಹಿಂದೆಯೇ ವೆಂಟಿಲೇಟರ್ ಖರೀದಿ ಮಾಡಲಾಗಿದ್ದರೂ ಉಸಿರಾಟದ ತೊಂದರೆ ಇದ್ದವರಿಗೆ ಉಪಯೋಗಿಸದೆ ರೋಗಿಗಳನ್ನು ಬೆಂಗಳೂರಿಗೆ ಸಾಗಿಸಿದ್ದು ಎಷ್ಟು ಸರಿ, ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿಸಿದ್ದು ಯಾವ ನ್ಯಾಯ ಎಂದು ಜನತೆ ಪ್ರಶ್ನಿಸಿದ್ದಾರೆ. ಪ್ರಕೃತಿ ವಿಕೋಪ ನಿಧಿಯನ್ನು ವೆಂಟಿಲೇಟರ್ಗಳಿಗೆ ಬಳಕೆ ಮಾಡಿದ್ದು ಸರಿಯೇ. ಆದರೆ ರೋಗಿಗಳಿಗೆ ಇದರಿಂದ ಪ್ರಯೋಜನವಿಲ್ಲದ ಮೇಲೆ ಏಕೆ ಆತುರಾತುರವಾಗಿ ಖರ್ಚು ಮಾಡಬೇಕಿತ್ತು ಎಂಬ ಪ್ರಶ್ನೆಗೆ ಜಿಲ್ಲಾಡಳಿತ ಉತ್ತರ ನೀಡಬೇಕಾಗಿದೆ.
ಹಣ ವ್ಯರ್ಥದ ಆತಂಕ: ವೆಂಟಿಲೇಟರ್ ಬಳಕೆ ಬಗ್ಗೆ ಸಿಬ್ಬಂದಿಗೆ ತರಬೇತಿ ಕೊಡಿಸಲು ವಿಳಂಬ ತೋರಿರುವುದು ಏಕೆ, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕೋವಿಡ್ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಇರಲಿಲ್ಲವೇ, ತಿಂಗಳುಗಟ್ಟಲೆ ವೆಂಟಿಲೇಟರ್ ಬಳಕೆಯಾಗದೆ ನಿಷ್ಕಿŠಯಗೊಂಡಲ್ಲಿ ಅದರ ದುರಸ್ತಿಪಡಿಸಲು ಸಾವಿರಾರು ರೂ. ಬೇಕಾಗಲಿದೆ. ಜಿಲ್ಲಾಡಳಿತ ಪರಿಹಾರ ಕಂಡುಕೊಳ್ಳದಿದ್ದರೆ ಕೋಟ್ಯಂತರ ರೂಪಾಯಿ ವ್ಯರ್ಥವಾಗಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ. ವೆಂಟಿಲೇಟರ್ಗಳ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಜಿಲ್ಲಾ ಸರ್ಜನ್ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ಕರೊನಾ ಹಿನ್ನೆಲೆಯಲ್ಲಿ ಖರೀದಿ ಮಾಡಿರುವ ವೆಂಟಿಲೇಟರ್ಗಳು ಬಳಕೆಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಮೂಲೆ ಸೇರಿದೆ ಎಂಬ ದೂರು ಕೇಳಿ ಬಂದಿದೆ. ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ವೆಂಟಿಲೇಟರ್ ಬಳಕೆ ಮಾಡಲು ಇರುವ ಸಮಸ್ಯೆ ಏನೆಂದು ತಿಳಿದುಕೊಳ್ಳಲು ಶೀಘ್ರವೇ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವೆ. ಎಸ್.ಮುನಿಸ್ವಾಮಿ, ಸಂಸದರು, ಕೋಲಾರ ವೆಂಟಿಲೇಟರ್ಗಳು ಬಳಕೆ ಆಗದಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಕಳೆದ ಅ.1ರಂದು ರೋಗಿಯೊಬ್ಬರಿಗೆ ವೆಂಟಿಲೇಟರ್ ಬೇಕಾಗಿತ್ತು, ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲದೆ ಬೆಂಗಳೂರಿಗೆ ಕರೆದೊಯ್ಯಲಾಯಿತು. ಜಿಲ್ಲಾಡಳಿತ ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಕೋಟಿಗಟ್ಟಲೆ ಹಣ ವ್ಯರ್ಥವಾಗಿ ವೆಂಟಿಲೇಟರ್ಗಳನ್ನು ಗುಜರಿಗೆ ಹಾಕುವ ಪರಿಸ್ಥಿತಿ ಉಂಟಾಗಬಹುದು. ಎಸ್.ಮಂಜುನಾಥ್, ನಾಗರಿಕ, ಕೋಲಾರ