ಬೆಳ್ತಂಗಡಿ: ಕಳಿಯ ಗ್ರಾಮದ ಮೂಡಾಯಿಪಲ್ಕೆ ಉದ್ಭವ ಶ್ರೀ ಆದಿಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ನಡೆಯುವ ಏಳನೇ ವಷರ್ದ ವಾರ್ಷಿಕ ಉತ್ಸವದಲ್ಲಿ ನಲಿಕೆ ಸಮುದಾಯದ ನರ್ತಕರು ಹಾಗೂ ಸಮಾಜದವರು, ಸಂಘದ ಸದಸ್ಯರು ಭಾಗವಹಿಸುವುದಿಲ್ಲ ಎಂದು ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್.ಪ್ರಭಾಕರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡಾಯಿಪಲ್ಕೆ ಶ್ರೀ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ದೇವರು ಹಾಗೂ ದೈವಗಳಿಗೆ ಪೂಜಾ ವಿಧಿವಿಧಾನಗಳನ್ನು ಮಾಡಿ, ರಾತ್ರಿ ಅವರು ನಂಬುವ ದೈವಗಳಿಗೆ ಪರ್ವ ಸೇವೆ ಹಾಗೂ ನೇಮೋತ್ಸವ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ 9 ದೈವಗಳು ಇದ್ದು, ಅದರಲ್ಲಿ ಗುಳಿಗ ದೈವಕ್ಕೆ ನೇಮೋತ್ಸವ ನಡೆದರೆ. ಉಳಿದ ದೈವಗಳಿಗೆ ಪರ್ವಸೇವೆ, ಅಗೇಲು ಸೇವೆ ಮಾತ್ರ ನಡೆಸುತ್ತಾರೆ.
ಗುಳಿಗ ದೈವದ ಆರಾಧಕರು ಎಲ್ಲ ಜಾತಿ, ಸಮುದಾಯಗಳಲ್ಲೂ ಇದ್ದಾರೆ. ಆದರೆ ನೇಮವನ್ನು ನಲಿಕೆ ಸಮುದಾಯದವರು ಮಾತ್ರ ಕಟ್ಟುವುದು. ಪ್ರಸ್ತುತ ಮೊಗೇರ ಸಮುದಾಯದ ಕೆಲವರು ಗುಳಿಗ ದೈವಕ್ಕೆ ಕೋಲ ಕಟ್ಟುತ್ತಿದ್ದಾರೆ. ಇದು ಬೇಸರದ ಸಂಗತಿ. ಈ ಬಗ್ಗೆ ಶ್ರೀ ಉದ್ಭವ ಆದಿಲಿಂಗೇಶ್ವರ ದೈವಸ್ಥಾನದ ಗುರಿಕಾರರು, ಅಧ್ಯಕ್ಷ ರುಕ್ಕಯ್ಯ ಎಂ ಹಾಗೂ ಅವರ ಮಗ ಚಿತ್ತರಂಜನ್ ಹಾಗೂ ಮನೆಯವರೊಂದಿಗೆ ನಾವು ಚರ್ಚಿಸಿ ತೀರ್ಮಾನಿಸಿದಂತೆ, ಕಳೆದ ಸಲ ನೇಮೋತ್ಸವವನ್ನು ಅವರು ಸ್ವ ಇಚ್ಛೆಯಿಂದ ನಿಲ್ಲಿಸುತ್ತೇವೆ ಎಂದು ಶ್ರೀ ಗುಳಿಗ ದೈವದ ಸನ್ನಿಧಿಯಲ್ಲಿ ಒಪ್ಪಿಕೊಂಡು, ದೈವದ ಹೆಸರಲ್ಲಿ ತಪ್ಪು ಕಾಣಿಕೆ ಹಾಕಿರುತ್ತಾರೆ.
ಆದರೆ, ಪ್ರಸ್ತುತ ಬೆಳ್ತಂಗಡಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ತಾತ್ಕಾಲಿಕ ನಿರ್ಬಂಧಕಾಜ್ಞೆ ಇರುವುದರಿಂದ ನಲಿಕೆ ಸಮುದಾಯದ ನರ್ತಕರು ಹಾಗೂ ಸಮಾಜದವರು, ಸಂಘದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಮುಂದಿನ ತೀರ್ಮಾನವು ನ್ಯಾಯಾದಾಲಯದಲ್ಲಿ ಇತ್ಯರ್ಥವಾಗಲಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ನಲಿಕೆ, ದೈವರಾಧನಾ ಸಮಿತಿ ದ.ಕ ಜಿಲ್ಲಾಧ್ಯಕ್ಷ ಜನಾರ್ದನ ಬುಡೋಳಿ, ತಾಲೂಕು ಸಂಘದ ಉಪಾಧ್ಯಕ್ಷ ರಾಮು ಶಿಶಿಲ, ಸದಸ್ಯ ವಿನಯಕುಮಾರ್ ಕೊರಗಪ್ಪ ಕಲ್ಲಡ್ಕ ಉಪಸ್ಥಿತರಿದ್ದರು. ವಿನಯ ಕುಮಾರ್ ಸ್ವಾಗತಿಸಿದರು.