ಒಂದಲ್ಲ, ಎರಡಲ್ಲ ಬರೋಬ್ಬರಿ 176 ಬಾರಿ ರಕ್ತದಾನ…!

01020102
Published on

ಬೆಳಗಾವಿ: ನನಗೆ ಸಣ್ಣಗೆ ನೆಗಡಿ, ಕೆಮ್ಮು ಬಂದಿದ್ದು ಬಿಟ್ಟರೆ ಜೀವನದಲ್ಲಿ ಯಾವುದೇ ದೊಡ್ಡ ಕಾಯಿಲೆ ಬಂದು ಆಸ್ಪತ್ರೆಗೆ ಹೋದ ಉದಾಹರಣೆಯಿಲ್ಲ. ರಕ್ತದಾನ ಮಾಡಿದ್ದರಿಂದಲೇ ನನ್ನ ಆರೋಗ್ಯ ಇಷ್ಟೊಂದು ಗಟ್ಟಿಮುಟ್ಟಾಗಿದೆ.

ಇದು, 176 ಬಾರಿ ರಕ್ತದಾನ ಮಾಡಿದ ಅನಗೋಳದ ನಿವಾಸಿ ವಿನಾಯಕ ಮಾರುತಿ ದೇಸಾಯಿ ಅವರ ಸಂತಸದ ನುಡಿಗಳು. 57 ವರ್ಷದ ವಿನಾಯಕ ಅವರು ಒಂದಲ್ಲ, ಎರಡು ಬಾರಿಯಲ್ಲ ಬರೋಬ್ಬರಿ 176 ಬಾರಿ ರಕ್ತದಾನ ದಾನಮಾಡಿ, ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ಇವರ ರಕ್ತದಾನ ಸೇವೆ ಯುವಪಡೆಗೆ ಮಾದರಿಯಾಗಿದೆ. ವಿನಾಯಕ 38 ವರ್ಷದಿಂದ ರಕ್ತದಾನದಲ್ಲಿ ತೊಡಗಿ ಹಲವಾರು ರೋಗಿಗಳ ಪ್ರಾಣ ಉಳಿಸಿದ್ದಾರೆ.

ವಿನಾಯಕ ದೇಸಾಯಿ ಬಿ.ಎ.ಪದವೀಧರರಾಗಿದ್ದು, ಪ್ರಸ್ತುತ ರಿಯಲ್ ಎಸ್ಟೆಟ್ ಉದ್ಯಮಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್)ಸ್ವಯಂ ಸೇವಕರಾಗಿದ್ದಾರೆ. ನಗರದ ಆರ್‌ಪಿಡಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗಿನಿಂದಲೂ (1983ರಿಂದ) ರಕ್ತದಾನ ಮಾಡುತ್ತ ಬಂದಿದ್ದಾರೆ. ರಕ್ತದಾನದಲ್ಲಿ ಡಬಲ್ ಸೆಂಚುರಿ ಸಾಧಿಸುವ ಹಾದಿಯಲ್ಲಿ ಇವರಿದ್ದಾರೆ.

ಸ್ವಯಂ ಸ್ಫೂರ್ತಿ: ಅಗತ್ಯ ಬಿದ್ದಾಗ ಪರಿಚಯಸ್ಥರಿಗೆ, ನೆಂಟರಿಗೆ ಹಾಗೂ ಸಾರ್ವಜನಿಕರ ಕೋರಿಕೆ ಮೇರೆಗೆ ರಕ್ತದಾನ ಮಾಡಿದ್ದಾರೆ. ಸ್ವಯಂ ಸ್ಫೂರ್ತಿಯಿಂದ ರಕ್ತದಾನದಲ್ಲಿ ತೊಡಗಿದ್ದಾರೆ. ‘ರಕ್ತದಾನಿ’ ಎಂದು ಗುರುತಿಸಿಕೊಂಡಿರುವ ಇವರನ್ನು ಸಂಘ-ಸಂಸ್ಥೆಗಳು ಸತ್ಕರಿಸಿವೆ. ರಕ್ತದಾನದ ಬಗ್ಗೆ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿ
ಸುವ ಕಾರ್ಯ ಮಾಡಿದ್ದಾರೆ. ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಎನ್ನುತ್ತಾರೆ ವಿನಾಯಕ ದೇಸಾಯಿ. ಇವರ ಪತ್ನಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅವರೂ ಸಹ ರಕ್ತದಾನ ಮಾಡಿದ್ದಾರೆ. ಮಕ್ಕಳೂ ರಕ್ತದಾನ ಮಾಡುವುದಕ್ಕೆ ಮುಂದಾಗಿರುವುದು ವಿಶೇಷ.

200ಕ್ಕೂ ಅಧಿಕ ಜನರು: ವಿನಾಯಕ ಅವರ ಪ್ರೇರಣೆಯಿಂದ ಬೆಳಗಾವಿ ನಗರದಲ್ಲಿ 200ಕ್ಕೂ ಅಧಿಕ ಜನರು ಸ್ವಯಂ ಸ್ಫೂರ್ತಿಯಿಂದ ರಕ್ತದಾನ ಮಾಡಲು ಮುಂದಾಗಿದ್ದಾರೆ. ಅವರೆಲ್ಲರ ಮಾಹಿತಿ ದೇಸಾಯಿ ಅವರ ಬಳಿ ಇದೆ. ಯಾರಿಗಾದರೂ ತುರ್ತಾಗಿ ರಕ್ತದ ಅವಶ್ಯಕತೆ ಇದ್ದಲಿ ಅವರ ಮೊಬೈಲ್ ನಂಬರ್ 6362784724 ಕರೆ ಮಾಡಬಹುದು.

52 ಸಾವಿರ ಯೂನಿಟ್ ರಕ್ತ ಸಂಗ್ರಹಕ್ಕೆ ಅಧಿಕಾರಿಗಳ ಗುರಿ
ಜಿಲ್ಲೆಯ ಜನಸಂಖ್ಯೆ 52 ಲಕ್ಷ ಇದ್ದು, ಶೇ.1ರಷ್ಟು ರಕ್ತ ಸಂಗ್ರಹಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗುರಿ ಹೊಂದಿದ್ದು, ಜಿಲ್ಲೆಯಲ್ಲಿ 52 ಸಾವಿರ ಯೂನಿಟ್ ರಕ್ತ ಸಂಗ್ರಹವಾಗಬೇಕಿತ್ತು. ಆದರೆ, 2019 ಮಾರ್ಚ್‌ನಿಂದ 2020ರ ಏಪ್ರಿಲ್ ತಿಂಗಳವರೆಗೆ ಕೇವಲ 38,675 ಯೂನಿಟ್ ರಕ್ತ ಸಂಗ್ರಹವಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ರಕ್ತ ಸಂಗ್ರಹಕ್ಕೆ ಹಿನ್ನಡೆಯಾಗಿದೆ. ರಕ್ತದಾನ ಶಿಬಿರ ಹಮ್ಮಿಕೊಳ್ಳುವುದಕ್ಕೆ ಮಾರಕ ಕರೊನಾ ಸೋಂಕು ಅಡ್ಡಿಯುಂಟು ಮಾಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಯುವ ಸಮೂಹ ಹಾಗೂ ದಾನಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ವಿನಾಯಕ ಮನವಿ ಮಾಡಿದ್ದಾರೆ.

| ಜಗದೀಶ ಹೊಂಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net